ರಾಹುಲ್ ಐನಾಪುರರ ಫಸ್ಟ್ ಲುಕ್ ‘ಗತ್ತು’!

Public TV
1 Min Read

ಹಿಂದೆ ತ್ರಾಟಕ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದ್ದವರು ರಾಹುಲ್ ಐನಾಪುರ. ಶಿವಗಣೇಶ್ ನಿರ್ದೇಶನ ಮಾಡಿದ್ದ ಆ ಚಿತ್ರದಲ್ಲಿ ವಿಚಿತ್ರ ಕಾಯಿಲೆ ಇರೋ ಅಧಿಕಾರಿಯ ಪಾತ್ರದಲ್ಲಿ ಅವರು ನಟಿಸಿದ್ದ ರೀತಿ ಕಂಡ ಪ್ರೇಕ್ಷಕರೆಲ್ಲ ಕನ್ನಡಕ್ಕೋರ್ವ ಖಡಕ್ ವಿಲನ್ ಎಂಟ್ರಿ ಆಯಿತೆಂದು ನಿರ್ಧರಿಸಿದ್ದರು. ಹೀಗೆ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ರಾಹುಲ್ ಇದೀಗ ಗತ್ತು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ.

 

ಈ ಶೀರ್ಷಿಕೆಗೆ ತಕ್ಕುದಾದ ಗತ್ತಿನ ಲುಕ್ಕಿನಲ್ಲಿಯೇ ರಾಹುಲ್ ಮಿಂಚಿದ್ದಾರೆ. ಇದೀಗ ಲಾಂಚ್ ಆಗಿರುವ ಗತ್ತು ಫಸ್ಟ್ ಲುಕ್ ಪೋಸ್ಟರ್‍ನಲ್ಲಿ ರಾಹುಲ್ ಐನಾಪುರ ಅವರ ಗೆಟಪ್ಪಿನ ಒಂದಷ್ಟು ಝಲಕ್‍ಗಳಿವೆ. ಅವುಗಳಲ್ಲಿ ಅವರು ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಜೊತೆಯಾಗಿ ಮಾಡಿದ ಮೇಲೆ ಮತ್ತದೇ ತಂಡ ಮತ್ತೆ ಜೊತೆಯಾಗೋದು ಅಪರೂಪ. ಆದರೆ ರಾಹುಲ್ ಐನಾಪುರ ಮತ್ತು ನಿರ್ದೇಶಕ ಶಿವ ಗಣೇಶ್ ವಿಚಾರದಲ್ಲಿ ಮೊದಲ ಕಾಂಬಿನೇಷನ್ನು ಹ್ಯಾಟ್ರಿಕ್ ಬಾರಿಸಿದೆ. ತ್ರಾಟಕ ಗೆಲುವು ಕಾಣುತ್ತಲೇ ಶಿವಗಣೇಶ್ ನಿರ್ದೇಶನ ಮಾಡಿದ್ದ ‘ಅದೃಶ್ಯ’ ಎಂಬ ಚಿತ್ರದಲ್ಲಿ ರಾಹುಲ್ ನಟಿಸಿದ್ದರು ಗತ್ತು ಮೂಲಕ ಈ ಜೋಡಿ ಮೂರನೇ ಬಾರಿ ಒಂದಾಗಿದೆ.

ರಾಹುಲ್ ಐನಾಪುರ ರಾಜಕಾರಣದ ಹಿನ್ನೆಲೆಯಿಂದ ಬಂದವರಾದರೂ ಅವರ ಪ್ರಧಾನ ಆಸಕ್ತಿ ಕೇಂದ್ರೀಕರಿಸಿಕೊಂಡಿದ್ದದ್ದು ಸಿನಿಮಾದತ್ತ. ಸಿನಿ ತೆಕ್ಕೆಗೆ ಬಿದ್ದ ಅವರು ತ್ರಾಟಕ ಮೂಲಕ ನಾಯಕನಾಗಿ ಹೊರ ಹೊಮ್ಮಿದ್ದರು. ಓರ್ವ ನಿರ್ದೇಶಕರಾಗಿ ರಾಹುಲ್ ಐನಾಪುರರ ಕಸುವೇನೆಂಬುದನ್ನು ನಿಖರವಾಗಿಯೇ ಅರಿತುಕೊಂಡಿರುವವರು ಶಿವಗಣೇಶ್. ಈ ಬಾರಿ ಗತ್ತು ಚಿತ್ರದ ಮೂಲಕ ನಾನಾ ಕೊಂಬೆಕೋವೆ, ವಿಸ್ತಾರಗಳಿರುವ ರಗಡ್ ಕಥೆಯನ್ನೇ ಅವರು ಸಿದ್ಧಪಡಿಸಿಕೊಂಡಂತಿದೆ. ಕಥೆಯ ವಿಚಾರವೂ ಸೇರಿದಂತೆ ಉಳಿದ ಅಂಶಗಳೆಲ್ಲ ಇನ್ನಷ್ಟೇ ಜಾಹೀರಾಗಬೇಕಿವೆ. ಆದರೆ ಗತ್ತು ಚಿತ್ರದ ಫಸ್ಟ್ ಲುಕ್ ಮಾತ್ರ ಮಸ್ತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *