ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

Public TV
2 Min Read

ಬೆಂಗಳೂರು: ಕಿರುತೆರೆಗೂ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಪ್ರೇಕ್ಷಕರ ನಾಡಿಮಿಡಿತವನ್ನು ಸ್ಪಷ್ಟವಾಗಿ ಗ್ರಹಿಸುವ ತಾಕತ್ತಿರುವ ನಿರ್ದೇಶಕನ ಪಾಲಿಗೆ ಆ ವ್ಯತ್ಯಾಸ ಸವಾಲಿನ ಸಂಗತಿಯಲ್ಲ. ನಿರ್ದೇಶಕ ತೇಜಸ್ವಿ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸಾಬೀತುಗೊಳಿಸಿದ್ದಾರೆ. ಅವರು ನಿರ್ದೇಶನ ಮಾಡಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭಾರೀ ಸದ್ದು ಮಾಡುತ್ತಲೇ ಸಾಗಿ ಬಂದಿತ್ತು. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಫ್ರೆಶ್ ಆದ ಕಥೆಯ ಹಿಂಟ್ ಬಿಟ್ಟು ಕೊಡುತ್ತಲೇ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿತ್ತು. ಅದೀಗ ಬಿಡುಗಡೆಯಾಗಿದೆ. ಈ ಮೂಲಕ ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟುವಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆದ್ದಿದ್ದಾರೆ.

ಸೃಜನ್ ಲೋಕೇಶ್ ಇಲ್ಲಿ ಸೂರ್ಯ ಎಂಬ ಪಾತ್ರವನ್ನು ಸಂಪೂರ್ಣವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರೆ. ತಂದೆಯ ಪಾಲಿಗೆ ಸೂರ್ಯ ಮುದ್ದಿನ ಮಗ. ಆತ ಅದೆಲ್ಲಿ ಸಹವಾಸ ದೋಷದಿಂದ ಹಾಳಾಗುತ್ತಾನೋ ಎಂಬ ಭಯದಿಂದ ಆತನನ್ನು ತಂದೆ ವಿದೇಶಕ್ಕೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಅದೇನೇ ಸೌಕರ್ಯಗಳು ಸಿಕ್ಕರೂ ಸೂರ್ಯನನ್ನು ಕಳ್ಳುಬಳ್ಳಿಯ ಬಂಧ ಸದಾ ಸೆಳೆಯುತ್ತಿರುತ್ತೆ. ಒಂದಷ್ಟು ವರ್ಷಗಳ ನಂತರ ಆತ ಹಳೇ ಗೆಳೆಯರನ್ನರಸಿ ಸ್ವದೇಶಕ್ಕೆ ಮರಳುತ್ತಾನೆ. ಈ ನಡುವೆ ಮದುವೆ ಮನೆಯೊಂದರಲ್ಲಿ ದಂತದ ಬೊಂಬೆಯಂಥಾ ಹುಡುಗಿ ಆತನ ಮನ ಸೆಳೆದಿರುತ್ತಾಳೆ. ಅದೇ ಗುಂಗಿನಲ್ಲಿ ತೇಲಾಡುತ್ತಲೇ ಸೂರ್ಯ ಗೆಳೆಯನ ಚಾಲೆಂಜು ಸ್ವೀಕರಿಸಿ ಕೆಲಸ ಹುಡುಕ ಹೋದರೆ ಆ ಕಂಪನಿಯಲ್ಲಿಯೂ ಸಾಕ್ಷಾತ್ತು ನಂದಿನಿಯ ದರ್ಶನವಾಗಿ ಸೂರ್ಯನೊಳಗೆ ಪ್ರೀತಿಯ ಪ್ರಭೆ ಮತ್ತಷ್ಟು ಪ್ರಕಾಶಮಾನವಾಗುತ್ತೆ.

ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆಂಬುದಕ್ಕಿಂತಲೂ ನಂದಿನಿಯನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸೂರ್ಯ ಅದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಆ ನಂತರದದ್ದು ಆಕೆಯನ್ನು ಒಲಿಸಿಕೊಳ್ಳೋ ಪಡಿಪಾಟಲು. ನಂದಿನಿ ಸುಳ್ಳಿನ ನೆರಳು ಸೋಕಿದರೂ ಕೊಸರಾಡುವ ಪೈಕಿ. ಆದರೆ ಸೂರ್ಯ ಸುಳ್ಳಿನ ಮಹಲಿನಲ್ಲಿಯೇ ಪ್ರೇಮಸೌಧ ಕಟ್ಟಿ ಬಿಟ್ಟಿರುತ್ತಾನೆ. ಅದಕ್ಕೆ ಮದುವೆ ಮೂಲಕ ಬ್ರೇಕ್ ಹಾಕೋ ಉದ್ದೇಶದಲ್ಲಿ ಸೂರ್ಯನಿರುವಾಗಲೇ ಮದುವೆ ಮನೆಯಲ್ಲಿಯೇ ಆತನ ಸುಳ್ಳಿನ ಪುರಾಣ ನಂದಿನಿ ಮುಂದೆ ಬಿಚ್ಚಿಕೊಳ್ಳುತ್ತೆ. ಆ ನಂತರದಲ್ಲಿ ಏನಾಗುತ್ತೆಂಬುದೂ ಸೇರಿದಂತೆ ಇಡೀ ಚಿತ್ರ ರೋಚಕವಾಗಿ ಮೂಡಿ ಬಂದಿದೆ.

ತೇಜಸ್ವಿ ಪ್ರೇಕ್ಷಕರ ಅಭಿಲಾಶೆ ಮತ್ತು ಸೃಜನ್ ಲೋಕೇಶ್ ಅವರಿಗೆ ತಕ್ಕುದಾಗಿಯೇ ಕಥೆ ಹೊಸದು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಳಿಕೇಳಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್. ಇಲ್ಲಿ ಆ ಬಿರುದು ಮತ್ತಷ್ಟು ಮಿರುಗುವಂಥ ಮಾತಿನ ಜುಗಲ್ಬಂಧಿ ಇದೆ. ಅಚ್ಚರಿಯಾಗೋದು ಸೃಜನ್ ಅವರ ಬದಲಾವಣೆ. ಸೃಜನ್ ಅದ್ಭುತ ನಟನಾಗಿ ಬದಲಾಗಿದ್ದಾರೆ. ಡ್ಯಾನ್ಸು, ಫೈಟಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಸೃಜಾ ತಾಜಾ ತಾಜ. ಇನ್ನುಳಿದಂತೆ ನಾಯಕಿಯಾಗಿ ಹರಿಪ್ರಿಯಾ ನಟನೆ ಬಗ್ಗೆ ಎರಡು ಮಾತಿಲ್ಲ. ಅಮ್ಮನಾಗಿ ನಟಿಸಿರೋ ತಾರಾ ಅವರದ್ದು ಎಂದಿನಂತೆ ಮಂತ್ರಮುಗ್ಧಗೊಳಿಸೋ ನಟನೆ. ಮಿಕ್ಕೆಲ್ಲ ತಾರಾಗಣವೂ ಅದಕ್ಕೆ ಸಾಥ್ ಕೊಟ್ಟಿದೆ. ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ತುಸುವೂ ತತ್ವಾರವಾಗದಂತೆ ತೇಜಸ್ವಿ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *