ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

Public TV
2 Min Read

ನೆಬಲ ಸಂಪೂರ್ಣ ಚಿತ್ರ ಹಳ್ಳಿ ಹಿನ್ನೆಲೆಯಲ್ಲೇ ನಡೆಯುತ್ತೆ. ಹಳ್ಳಿಯ ಆಚರಣೆ, ಸಂಪ್ರದಾಯ, ಕಟ್ಟುಪಾಡು, ಹಬ್ಬ, ಹೀಗೆ ಎಲ್ಲವನ್ನು ತೋರಿಸುತ್ತ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕರು. ಮಹಾತ್ಮ ಗಾಂಧೀಜಿ ಹೇಳಿದ ಹಳ್ಳಿಗಳೇ ದೇಶದ ಅಭಿವೃದ್ಧಿಯ ಜೀವಾಳ ಅನ್ನೋದನ್ನ ಮತ್ತೆ ಮತ್ತೆ ನೆನಪಿಸಿದ್ದಾರೆ. ತ್ರಂತ್ರಜ್ಞಾನದ ಜೊತೆ ಹಳ್ಳಿಯ ಆಚರಣೆಗಳು, ಸಂಪ್ರದಾಯಗಳು ಕಳೆದು ಹೋಗ್ಬಾರ್ದು ಎರಡು ಒಟ್ಟೊಟ್ಟಿಗೆ ಸಾಗಬೇಕು ಎಂದು ಎಚ್ಚರಿಸುತ್ತಾ ಭರಪೂರ ಮನರಂಜನೆಯನ್ನು ನೀಡುತ್ತೆ.

ಮಂಡ್ಯದಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಮುದ್ದೆ ತಿನ್ನುವ ಸ್ಪರ್ಧೆಯೇ ಈ ಚಿತ್ರದ ಕಥಾವಸ್ತು. ಮುದ್ದೆ ತಿನ್ನುವ ಸ್ಪರ್ಧೆಯ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಇರುವಂತೆ ಈ ಹಳ್ಳಿಯ ಬಗ್ಗೆ ಸದಾ ಆಲೋಚಿಸುವ ಶಿವು ಎಂಬ ಹುಡುಗ ಈ ಚಿತ್ರದ ಕಥಾ ನಾಯಕ. ಯಾವಾಗಲು ಸಕಾರಾತ್ಮಕ ಯೋಚನೆ ಜೊತೆಗೆ ಜಾಲಿಯಾಗಿರುವ ಹುಡುಗ ಶಿವು. ಹಳ್ಳಿಯ ಬಗ್ಗೆ, ಜನ್ರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾನೆ. ಜೊತೆಗೆ ಆತನ ಪ್ರೇಮ ಪುರಾಣವೂ ಚಿತ್ರದಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಕೃಷಿಯೇ ಉಸಿರಾಗಿಸಿಕೊಂಡಿರುವ ಹಳ್ಳಿ ಜನ್ರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಆಗ ಜನ್ರ ಬದುಕು ಹಸನಾಗುತ್ತೆ, ಸುಧಾರಿಸುತ್ತೆ ಅನ್ನೋದು ಶಿವು ಆಲೋಚನೆ ಒಂದು ಕಡೆ ಆದ್ರೆ, ಹಿಂದಿನಿಂದ ನಡೆದುಬಂದ ಮುದ್ದೆ ತಿನ್ನುವ ಸ್ಪರ್ಧೆ ಇನ್ನೊಂದು ಕಡೆ. ಶಿವು ಕನಸು ಈಡೇರುತ್ತಾ? ಮುದ್ದೆ ತಿನ್ನುವ ಸ್ಪರ್ಧೆ ಹೇಗಿತ್ತು ಅನ್ನೋದಕ್ಕೆ ಆನೆಬಲ ಚಿತ್ರ ನೋಡಿಯೇ ತಿಳಿಯಬೇಕು.

ನೈಜತೆಗೆ ಹತ್ತಿರವಾಗಿ ಸಾಗೋ ಆನೆಬಲ ಚಿತ್ರ ನೋಡುಗರನ್ನು ಸೆಳೆಯುತ್ತೆ. ಮಂಡ್ಯ ಆಡು ಭಾಷೆಯ ಸೊಗಡನ್ನು ತೆರೆ ಮೇಲೆ ಸವಿಯೋ ಆನಂದ ಚಿತ್ರದ ಮೇಲೆ ಇನ್ನಷ್ಟು ಸೆಳೆತ ಉಂಟು ಮಾಡುತ್ತೆ. ಸಿಲ್ವರ್ ಸ್ಕ್ರೀನ್ ಮೇಲೆ ಆಡಂಬರ ಅಬ್ಬರ ನೋಡಿ ಬೋರಾಗಿದ್ದ ಪ್ರೇಕ್ಷಕನಿಗೆ ಹಳ್ಳಿ ಸೊಬಗು, ಸೊಗಡು ಸವಿಯೋ ಅವಕಾಶವನ್ನು ಆನೆಬಲ ಚಿತ್ರ ತಂದಿದೆ. ನಿರ್ದೇಶಕರ ಈ ಪ್ರಯತ್ನಕ್ಕೆ ನಾವು ಶಬ್ಬಾಶ್ ಹೇಳಲೇಬೇಕು. ಒಟ್ಟಿನಲ್ಲಿ ಮುದ್ದೆ ಉಂಡಷ್ಟೇ ಖುಷಿಯನ್ನು ಆನೆಬಲ ಚಿತ್ರ ನೀಡುತ್ತೆ.

ಚಿತ್ರ: ಆನೆಬಲ
ನಿರ್ದೇಶನ: ಸೂನಗಹಳ್ಳಿ ರಾಜು
ನಿರ್ಮಾಪಕ: ಎ.ವಿ.ವೇಣುಗೋಪಾಲ್ ಅಡಕಮಾರನಹಳ್ಳಿ
ಸಂಗೀತ ನಿರ್ದೇಶನ: ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಾಹಕ: ಜಿ.ಟಿ. ಬೆಟ್ಟೇಗೌಡ
ತಾರಾಬಳಗ: ಸಾಗರ್, ರಕ್ಷಿತ, ಇತರರು

ರೇಟಿಂಗ್-3.5/4

Share This Article
Leave a Comment

Leave a Reply

Your email address will not be published. Required fields are marked *