ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

Public TV
2 Min Read

ನ್ನಡ ಚಿತ್ರರಂಗದಲ್ಲೀಗ ಎಲ್ಲ ರೀತಿಯಲ್ಲಿಯೂ ಚೆಂದಗೆ ಮೂಡಿ ಬಂದಿರುವ ಸಿನಿಮಾಗಳನ್ನು ಉಳಿಸಿಕೊಳ್ಳಲೂ ಹೋರಾಟ ನಡೆಸುವಂಥಾ ಸ್ಥಿತಿಯೊಂದು ಚಾಲ್ತಿಯಲ್ಲಿದೆ. ನೋಡಿದವರೆಲ್ಲ ಸದಭಿಪ್ರಾಯ ವ್ಯಕ್ತಪಡಿಸಿದರೂ ಕೂಡಾ ವಾರದಿಂದ ವಾರವನ್ನು ದಾಟಿಕೊಳ್ಳುವುದೇ ಕಷ್ಟವೆಂಬ ಈ ವಾತಾವರಣದಲ್ಲಿ ‘ಕೆರೆಬೇಟೆ’ (Kerebete) ಚಿತ್ರಕ್ಕೆ ಇದೀಗ ಚಿತ್ರರಂಗವೇ ಸಾಥ್ ಕೊಟ್ಟಂತಾಗಿದೆ. ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಈ ಚಿತ್ರ, ಆರಂಭದಿಂದಲೂ ನೆಲಮೂಲದ ಕಥೆಯೊಂದಿಗೆ ಸುದ್ದಿ ಕೇಂದ್ರದಲ್ಲಿತ್ತು. ಹಾಗೆ ಹರಳುಗಟ್ಟಿಕೊಂಡಿದ್ದ ನಿರೀಕ್ಷೆಗಳಿಗೆ ತಕ್ಕುದಾಗಿ ಮೂಡಿ ಬಂದಿದ್ದ ‘ಕೆರೆಬೇಟೆ’ಗೆ ನಾನಾ ಸವಾಲುಗಳು ಎದುರಾಗಿದ್ದವು. ಇದೀಗ ಅದೆಲ್ಲವನ್ನೂ ಸಮರ್ಥವಾಗಿ ದಾಟಿಕೊಂಡಿರುವ ಈ ಸಿನಿಮಾ ಎರಡನೇ ವಾರದ ಹೊತ್ತಿಗೆಲ್ಲ ಭರ್ಜರಿ ಪ್ರದರ್ಶನದತ್ತ ದಾಪುಗಾಲಿಡುತ್ತಿದೆ.

ರಾಜ್ ಗುರು ಬಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರವಾದ ‘ಕೆರೆಬೇಟೆ’ ಇಂದಿಗೆ ಚೇತರಿಸಿಕೊಂಡು, ಮುನ್ನುಗ್ಗುತ್ತಿರೋದರ ಹಿಂದೆ ನಟ ನಟಿಯರ ಬೆಂಬಲವಿದೆ. ಒಂದೊಳ್ಳೆ ಕಂಟೆಂಟು ಹೊಂದಿದ್ದರೂ, ಕನ್ನಡದ ಮಟ್ಟಿಗೆ ಅಪರೂಪದ್ದೆಂಬಂಥಾ ಕಥೆಯನ್ನೊಳಗೊಂಡಿದ್ದರೂ ಕೊಂಚ ಹಿನ್ನಡೆ ಕಂಡಾಗ ಚಿತ್ರರಂಗದ ಮಂದಿ ಈ ಸಿನಿಮಾವನ್ನು ಗೆಲ್ಲಿಸುವ ಪಣತೊಟ್ಟಂತೆ ಅಖಾಡಕ್ಕಿಳಿದಿದ್ದರು. ತಮ್ಮ ಸಿನಿಮಾದ ಬ್ಯುಸಿಯ ನಡುವೆಯೂ ಧ್ರುವ ಸರ್ಜಾ (Dhruva Sarja) ‘ಕೆರೆಬೇಟೆ’ಯ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ, ಚಿತ್ರಮಂದಿರಗಳಿಗೆ ಬಂದು ನೋಡುವಂತೆ ಬಿನ್ನವಿಸಿಕೊಂಡಿದ್ದರು. ನಂತರದಲ್ಲಿ ಖುದ್ದು ಧ್ರುವ ಸರ್ಜಾ ಅವರೇ ಕೆರೆಬೇಟೆಯನ್ನು ವೀಕ್ಷಿಸಿ ಥ್ರಿಲ್ ಆಗಿದ್ದರಲ್ಲದೇ, ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದರು.

ಆ ನಂತರದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ (Milana) ದಂಪತಿ ಕೆರೆಬೇಟೆಯನ್ನು ನೋಡಿ ಖುಷಿಗೊಂಡಿದ್ದರು. ಆ ನಂತರ ಅಜೇಯ್ ರಾವ್, ಚೈತ್ರಾ ಆಚಾರ್, ಚೇತನ್ ಅಹಿಂಸಾ ಮುಂತಾದವರೂ ಕೆರೆಬೇಟೆಯನ್ನು ನೋಡಿ ಮುದಗೊಂಡಿದ್ದಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೂ ನಟ ನಟಿಯರನೇಕರು ಈ ಸಿನಿಮಾವನ್ನು ವೀಕ್ಷಿಸುಜತ್ತಿದ್ದಾರೆ. ವಿಶೇಷವೆಂದರೆ, ಹೀಗೆ ಸಿನಿಮಾ ನೋಡಿ ಸದಭಿಪ್ರಾಯ ಹಂಚಿಕೊಳ್ಳುತ್ತಾ ಕೆರೆಬೇಟೆಯನ್ನು ಗೆಲ್ಲಿಸಲು ಸೆಲೆಬ್ರಿಟಿಗಳು ಟೊಂಕ ಕಟ್ಟಿ ನಿಂತ ಬೆನ್ನಲ್ಲೇ, ಪ್ರೇಕ್ಷಕರೂ ಕೂಡಾ ‘ಕೆರೆಬೇಟೆ’ (Kerebete) ನೋಡಲು ಮುನ್ನುಗ್ಗುತ್ತಿದ್ದಾರೆ.

ಎರಡನೇ ವಾರದ ಹೊತ್ತಿಗೆಲ್ಲ ಕೆರೆಬೇಟೆಯ ಪ್ರದರ್ಶನ ರೋಮಾಂಚಕವಾಗಿಯೇ ಚೇತರಿಕೆ ಕಾಣುತ್ತಿದೆ. ಯಾವುದ್ಯಾವುದೋ ಪ್ರೇರಣೆಯಿಂದ ಈ ಸಿನಿಮಾ ನೋಡಿದವರೆಲ್ಲ ಬೇಷರತ್ತಾಗಿ ಮೆಚ್ಚಿಕೊಂಡಿದ್ದಾರೆ. ಈಗಂತೂ ಮೆಲ್ಲಗೆ ಬಾಯಿಂದ ಬಾಯಿಗೆ ಕೆರೆಬೇಟೆಯ ಆಂತರ್ಯದ ಖದರ್ ಹಬ್ಬಿಕೊಳ್ಳುತ್ತಿದೆ. ಹೀಗೆ ಪ್ರೇಕ್ಷಕರ ವಲಯದಲ್ಲಿ ಹಬ್ಬಿಕೊಳ್ಳುವ ಒಳ್ಳೆ ಮಾತುಗಳು ಯಾವುದೇ ಸಿನಿಮಾಗಳ ಪಾಲಿಗೆ ಗೆಲುವಿನ ನಿಖರ ಸೂಚನೆ. ಸದ್ಯದ ಮಟ್ಟಿಗೆ ‘ಕೆರೆಬೇಟೆ’ ಚಿತ್ರದ ಸುತ್ತ ಅಂಥಾದ್ದೊಂದು ಪಾಸಿಟಿವ್ ವಾತಾವರಣ ಹಬ್ಬಿಕೊಂಡಿದೆ. ಇದರಿಂದಾಗಿ ಗೌರಿಶಂಕರ್, ನಿರ್ದೇಶಕ ರಾಜ್ ಗುರು, ನಿರ್ಮಾಪಕ ಜೈಶಂಕರ್ ಪಟೇಲ್ ಸೇರಿದಂತೆ ಒಂದಿಡೀ ಚಿತ್ರತಂಡದ ಶ್ರಮ ಸಾರ್ಥಕಗೊಂಡಂತಾಗಿದೆ. ಸಾಲು ಸಾಲಾಗಿ ಎದುರಾದ ಸವಾಲುಗಳನ್ನೆಲ್ಲ ಎದೆಗುಂದದೆ ಎದುರಿಸಿದ ಫಲವಾಗಿಯೇ ಇದೀಗ ಚಿತ್ರಮಂದಿರ ತುಂಬಿಕೊಳ್ಳುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ತಾನೇ ತಾನಾಗಿ ಕೆರೆಬೇಟೆಯ ಬಗ್ಗೆ ಚೆಂದದ ಅಭಿಪ್ರಾಯ, ವಿಮರ್ಶೆಗಳು ಹರಿದಾಡುತ್ತಿವೆ. ಇದೆಲ್ಲವೂ ಕೂಡಾ ಸದ್ಯದ ಮಟ್ಟಿಗೆ ಒಳಿತಿನ ಮುನ್ಸೂಚನೆಯಾಗಿ ಕಾಣಿಸುತ್ತಿದೆ. ಅಷ್ಟಕ್ಕೂ ಇಂಥಾ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳುವ ಜರೂರತ್ತಿದೆ. ಭಿನ್ನ ಪ್ರಯತ್ನಗಳನ್ನು ಸದಾ ಬೆಂಬಲಿಸುವ ಪ್ರೇಕ್ಷಕರ ಕೃಪೆಯೂ ಇಂಥಾ ಸಿನಿಮಾಗಳತ್ತ ಹರಿಯಬೇಕಿದೆ. ಕೆರೆಬೇಟೆ ಎಂಬುದು ಮಲೆನಾಡು ಸೀಮೆಯ ನೆಲದ ಘಮಲಿನ ಚಿತ್ರ. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಮೇಲ್ಮಟ್ಟದಲ್ಲಿರುವ ಕೆರೆಬೇಟೆ, ಎಲ್ಲ ವರ್ಗದ ಪ್ರೇಕ್ಷಕರಿಗೂ ಪಥ್ಯವಾಗಬಲ್ಲ ಚಿತ್ರ. ಇಂಥಾ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸೋದು ಚಿತ್ರರಂಗದ ಭವಿಷ್ಯದ ದೃಷ್ಟಿಯಿಂದಲೂ ತರ್ತುನ ಸಂಗತಿ ಎಂಬ ಅಭಿಪ್ರಾಯ ಎಲ್ಲ ದಿಕ್ಕುಗಳಿಂದಲೂ ಹೊಮ್ಮುತ್ತಿದೆ.

Share This Article