ನಂ.1 ನಟನೆಂಬ ಅಹಂ ಬಿಟ್ಟುಬಿಡಿ – ಸ್ಟಾರ್ ನಟರಿಗೆ ನಟಿ ರಮ್ಯಾ ಮನವಿ

Public TV
4 Min Read
– ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನೋದು ನೋಡಿ ಬೇಜಾರಾಗ್ತಿದೆ
– ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನೋ ಅರಿವು ಎಲ್ಲರಿಗೂ ಇರಬೇಕು
– ಫ್ಯಾನ್ಸ್ ವಾರ್ ಬಗ್ಗೆ ದನಿ ಎತ್ತಿದ ರಮ್ಯಾ

ನ್ನಡ ಚಿತ್ರರಂಗದಲ್ಲಿ (Kannada Film Industry) ಫ್ಯಾನ್ಸ್‌ಗಳ ನಡುವೆ ವಾರ್ (Fans War) ನಡೆಯುತ್ತಿದೆ. ನೆಚ್ಚಿನ ಕಲಾವಿದರನ್ನ ಹೊಗಳುವ ಭರದಲ್ಲಿ ಮತ್ತೊಬ್ಬ ನಟನಿಗೆ ಬೈಯ್ಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇವರ ವಿರುದ್ಧ ಸ್ಯಾಂಡಲ್‌ವುಡ್ (Sandalwood) ಕ್ವೀನ್ ನಟಿ ರಮ್ಯಾ (Actor Ramya) ದನಿ ಎತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ (Social Media) ತಮ್ಮ ತಮ್ಮ ಅಭಿಮಾನಿಗಳು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ನಟರು ಗಮನಿಸಬೇಕು. ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳುವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು ಎಂದು ರಮ್ಯಾ ಕರೆ ನೀಡಿದ್ದಾರೆ. ಜೊತೆಗೆ ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ‘ಲಾರಿಂಜೈಟಿಸ್’ ಖಾಯಿಲೆ: ಆಸ್ಪತ್ರೆಗೆ ದಾಖಲು

ರಮ್ಯಾ ಅವರ ಟ್ವೀಟ್‌ನಲ್ಲಿ ಏನಿದೆ?
`ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರೂ ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ. ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷ್ಟೇ ಅಲ್ಲ, ಸಂಗೀತ ನಿರ್ದೇಶಕರು, ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು, ಫೈಟ್ ಮಾಸ್ಟರ್‌ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ. ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು. ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದೂ ಕಷ್ಟವಾಗಿದ್ದರೆ, ಹಲವರಿಗೆ ಮೈ ತುಂಬಾ ಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತಾ ಬಂದಿರಬಹುದು. ಹಲವರು ಇದ್ದುದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಂದದ್ದು ಉಂಟು. ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ. ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲಸಾಧ್ಯ.

ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ. ನಾನು ಯಾವತ್ತಿಗೂ ನಂಬರ್ 1 ಮತ್ತು ಈ ಸ್ಥಾನ ನನಗೆ ಮಾತ್ರ ಧಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು. ಇದನ್ನೂ ಓದಿ: ಡೇಂಜರ್ ಝೋನ್‌ನಲ್ಲಿ 8 ಸ್ಪರ್ಧಿಗಳು, ಯಾರ ಆಟಕ್ಕೆ ಬ್ರೇಕ್ ಹಾಕಲಿದ್ದಾರೆ ಬಿಗ್ ಬಾಸ್

ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ. ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನೂ ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತಹ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ. ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗುತ್ತಿದೆ.

ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ. ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ ಇರುವ ಹೆಗ್ಗಳಿಕೆ, ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ. ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳುವಳಿಕೆ ಹೇಳಿ ಅವರನ್ನು ಸುಸಂಸ್ಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು.

ಕನ್ನಡ ಚಿತ್ರರಂಗ ಇವತ್ತು ದೇಶ-ವಿದೇಶಗಳಲ್ಲಿ ದೊಡ್ಡ ಖ್ಯಾತಿ ಪಡೆದಿದೆ. ಐಎಂಡಿಬಿ ಉನ್ನತ 10 ಚಿತ್ರಗಳ ಪಟ್ಟಿಯಲ್ಲಿ 3 ಕನ್ನಡ ಚಿತ್ರಗಳಿವೆ ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ. ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ, ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಫೂರ್ತಿ ಬೇಕಿದೆಯೇ? ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಅಗಿರಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ. ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನ ಮಾಡೋಣ, ಎಲ್ಲರಿಗೂ ಒಳಿತಾಗಲಿ ಎಂದು ಬರೆದುಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *