ನನ್ನ ವರ್ಜಿನಿಟಿ ಕಳೆಯಲು ನೀನು ಹೆಲ್ಪ್ ಮಾಡ್ತೀಯಾ – ಮಂಚಕ್ಕೆ ಕರೆದವರ ಕತೆ ಬಿಚ್ಚಿಟ್ಟ ಕನ್ನಡತಿ

Public TV
3 Min Read

ಬೆಂಗಳೂರು: ಬಾಲಿವುಡ್, ಟಾಲಿವುಡ್ ಹಾಗೂ ಗಾಂಧಿನಗರದಲ್ಲಿ ಮೀ ಟೂ ಅಭಿಯಾನ ರಂಗೇರಿದ್ದು, ಈಗ ಸ್ಯಾಂಡಲ್‍ವುಡ್ ನಟಿ ಸಂಗೀತಾ ಭಟ್ ಮೀ ಟೂ ಬಗ್ಗೆ ಮಾತನಾಡಿದ್ದಾರೆ.

ಚಾನ್ಸ್ ಕೊಡುವ ನೆಪದಲ್ಲಿ ತನ್ನನ್ನ ಮಂಚಕ್ಕೆ ಕರೆದ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕರಾಳ ಮುಖವನ್ನ ಸಂಗೀತಾ ಭಟ್ ಬಟಾಬಯಲು ಮಾಡಿದ್ದಾರೆ. 2008ರಲ್ಲಿ ನಾನು ಕನ್ನಡ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದೆ. ನನಗೆ ಆಗ 14 ವರ್ಷವಾಗಿತ್ತು. ಖ್ಯಾತ ಸೀರಿಯಲ್ ನಟಿಯೊಬ್ಬರ ಪತಿ ಆ ಚಿತ್ರವನ್ನ ನಿರ್ಮಿಸುತ್ತಿದ್ದರು. ಒಂದು ದಿನ ಕಾಸ್ಟಿಂಗ್ ಡೈರೆಕ್ಟರ್ ನನ್ನ ಅಮ್ಮನಿಗೆ ತಾನು ಅವಳ ಅಣ್ಣನಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ನನ್ನನ್ನು ಕಾಸ್ಟ್ಯೂಮ್ ಟೆಸ್ಟ್ ಗೆಂದು ವಿಜಯನಗರದ ಆಫೀಸಿಗೆ ಕರೆದುಕೊಂಡು ಹೋಗಿದರು.

ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ನನ್ನ ದೇಹವನ್ನು ಮುಟ್ಟತೊಡಗಿದರು. ನನಗೆ ಏನಾಗುತ್ತಿದೆ ಎಂದೇ ಅರಿವಾಗಿರಲಿಲ್ಲ. ಕಡೆಗೆ ಇವೆಲ್ಲಾ ಚಿತ್ರರಂಗದಲ್ಲಿ ಸಾಮಾನ್ಯ ಎಂದು ಹೇಳಿ ಏನೂ ಆಗದಂತೆ ಇರಲು ಸೂಚಿಸಿ ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ನಿರ್ದೇಶಕರು ನನ್ನ ಕಾಸ್ಟ್ಯೂಮ್ ನೋಡುವ ನೆಪದಲ್ಲಿ ಕೋಣೆಯ ಬಾಗಿಲು ಹಾಕಿ ನನ್ನ ಮುಂದೆ ಕೂತರು. ನಂತರ ಎದ್ದು ಬಂದು ನನ್ನ ದೇಹದ ಭಾಗಗಳನ್ನು ಮುಟ್ಟತೊಡಗಿದರು. ನಾನು ಗಾಬರಿಯಿಂದ ಹೆದರಿ ಅಲ್ಲಿಂದ ಓಡಿಬಂದೆ. ಆ ಚಿತ್ರ ಅಲ್ಲಿಗೇ ನಿಂತಿತು ಎಂದು ಸಂಗೀತಾ ಭಟ್ ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

2009ರಲ್ಲಿ ಪ್ರಸಿದ್ಧ ನಟನ ಚಿತ್ರಕ್ಕೆ ಆಯ್ಕೆಯಾಗಿದ್ದೆ. ನನ್ನ ಅಮ್ಮ ಒಂದು ದಿನ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಕುಡಿದು ಬಂದಿದ್ದ ಅವರು ಮನೆಯಲ್ಲಿ ನನ್ನ ಕೋಣೆಗೆ ನುಗ್ಗಿ ಅಸಭ್ಯವಾಗಿ ವರ್ತಿಸತೊಡಗಿದ್ದರು. ನಾನು ಮತ್ತು ನನ್ನ ಅಮ್ಮ ಅವರಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದೆವು.

2010ರಲ್ಲಿ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದೆ. ಹೋಟೆಲಿನಲ್ಲಿ ವಿಶ್ರಾಂತಿ ವೇಳೆ ಲೇಡಿ ಹೇರ್ ಡ್ರೆಸ್ಸರ್ ನನ್ನ ದೇಹಕ್ಕೆ ಕೈ ಹಾಕತೊಡಗಿದರು. ನನ್ನ ಉಡುಪಿನ ಒಳಗೆ ಕೈ ಹಾಕಿದಾಗ ನಾನು ಬೈದು ಹೋಟೆಲ್ ರೂಮಿನಿಂದ ಆಚೆ ಬಂದೆ. ಬಳಿಕ ಆಕೆ ಕ್ಷಮೆ ಯಾಚಿಸಿದರು. ಕೊನೆಗೊಂದು ದಿನ ಆಕೆಯೇ ಒಂದು ಚಿತ್ರಕ್ಕೆ ನನ್ನನ್ನು ಸೂಚಿಸಿದರು. ಪ್ರಸಿದ್ಧ ನಟರು ಆ ಚಿತ್ರದಲ್ಲಿ ನಟಿಸಬೇಕಾಗಿತ್ತು. ಖ್ಯಾತ ಹಿರಿಯ ನಿರ್ದೇಶಕರು ನಿರ್ದೇಶನ ಮಾಡುತ್ತಿದ್ದ ಚಿತ್ರ ಅದು. ಅವರು ಒಂದು ದಿನ ಫೋನ್ ಮಾಡಿದರು. ಚಿತ್ರಕಥೆ ಕುರಿತು ಮಾತನಾಡುವ ಬದಲು ರೂಮಿಗೆ ಬಾ ಎಂದರು. ಪ್ರಶ್ನೆ ಮಾಡಿದ್ದಕ್ಕೆ ಅಮಾಯಕಳಂತೆ ನಟಿಸಬೇಡ. ನನಗೆ ಹೇರ್ ಡ್ರೆಸ್ಸರ್ ಎಲ್ಲಾ ಹೇಳಿದ್ದಾಳೆ ಎಂದರು.

2012ರಲ್ಲಿ ನಾನು ನನ್ನಂತೆ ಅವಕಾಶಕ್ಕಾಗಿ ಕಾಯುತ್ತಿದ್ದ ನಟಿಯರೊಂದಿಗೆ ವಾಸಿಸುತ್ತಿದ್ದೆ. ಸೂಪರ್ ಹಿಟ್ ಪೊಲೀಸ್ ಸಿನಿಮಾ ಮಾಡಿ ಗೆದ್ದಿದ್ದ ನಿರ್ಮಾಪಕರೊಬ್ಬರು ನನ್ನ ರೂಮ್‍ಮೇಟ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ನಾನು ಅವರನ್ನು ಅಣ್ಣಾ ಎಂದು ಕರೆಯುತ್ತಿದ್ದೆ. ಆದರೆ ಅವರು ಒಂದು ದಿನ ನೀನು ನನ್ನ ಜೊತೆ ಒಂದೇ ಒಂದು ಸಲ ಮಲಗಿದರೆ ದೊಡ್ಡ ನಟನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಮಾಡುತ್ತೇನೆ ಎಂದು ಹೇಳಿದರು ಅಂತ ಸಂಗೀತಾ ಅವರು ತಿಳಿಸಿದ್ದಾರೆ.

2015-2016ರಲ್ಲಿ ಪ್ರಸಿದ್ಧ ನಿರ್ದೇಶಕರ ಚಿತ್ರದಲ್ಲಿ ನಟಿಸುತ್ತಿದ್ದೆ. ಅವರು ಮಧ್ಯರಾತ್ರಿ ಮೆಸೇಜ್ ಮಾಡಿ ನನಗೆ ಬರೆಯಲು ಸ್ಫೂರ್ತಿ ಬೇಕು. ನೀನು ಯಾವ ಡ್ರೆಸ್ ಧರಿಸಿಕೊಂಡಿದ್ದರೂ ಸರಿ ಫೋಟೋ ಕಳುಹಿಸು ಎನ್ನುತ್ತಿದ್ದರು. 2017ರಲ್ಲಿ ಒಂದು ದೊಡ್ಡ ಸಿನಿಮಾಗೆ ಸಹಿ ಹಾಕಿದ್ದೆ. ಪ್ರಸಿದ್ದ ತೆಲುಗು ಚಿತ್ರದ ರಿಮೇಕ್ ಅದು. ಒಬ್ಬ ಸ್ಟಾರ್ ಆ ಚಿತ್ರದ ನಾಯಕ. ಅವರು ಇನ್ ಸ್ಟಾಗ್ರಾಮ್‍ನಲ್ಲಿ ನನಗೆ ಮೆಸೇಜ್ ಮಾಡಿ ನಂಬರ್ ಪಡೆದರು. ನಂತರ ಕಾಲ್ ಮಾಡಿ ನೀನು ವರ್ಜಿನ್ನಾ ಎಂದು ಕೇಳಿದರು. ನನಗೆ ಶಾಕ್ ಆಯಿತು. ಆತ ಮುಂದುವರೆಸಿ ನನ್ನ ವರ್ಜಿನಿಟಿ ಕಳೆಯಲು ನೀನು ಹೆಲ್ಪ್ ಮಾಡುತ್ತೀಯಾ ಎಂದು ಕೇಳಿದರು. ನಾನು ಬೇರೆ ಹುಡುಗನ ಜೊತೆ ಕಮಿಟ್ ಆಗಿದ್ದೇನೆ ಎಂದಿದ್ದಕ್ಕೆ ಫೋನ್ ಕಟ್ ಮಾಡಿದ್ದರು ಎಂದು ತಮ್ಮ ಜೀವನದಲ್ಲಿ ನಡೆದ ಮೀ ಟೂ ಬಗ್ಗೆ ಹೇಳಿಕೊಂಡಿದ್ದಾರೆ.

ಅಸಲಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕರು ಯಾರು ಅನ್ನೋದನ್ನ ಸಂಗೀತಾಭಟ್ ರಿವೀಲ್ ಮಾಡಿಲ್ಲ. ಆದರೆ ಸ್ಯಾಂಡಲ್‍ವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ತಾಂಡವಾಡುತ್ತಿದೆ ಅನ್ನೋ ಸತ್ಯವನ್ನು ಹೇಳಿದ್ದಾರೆ.

ಸಿನಿಮಾ ಸೆಳೆತಕ್ಕೆ ಸಿಲುಕಿ ಬಣ್ಣದ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುವುದಕ್ಕೆ ಬಂದ ಸಂಗೀತಾ ಭಟ್ ಕಾಮುಕರ ಕೈಗೆ ಸಿಲುಕಿ ಮಾನಸಿಕವಾಗಿ ನಲುಗಿಹೋಗಿದ್ದಾರೆ. ಸಿನಿಮಾರಂಗದ ಸಹವಾಸವೇ ಬೇಡ ಎಂದು ನಿರ್ಧರಿಸಿ ಸಿನಿಲೋಕಕ್ಕೆ ಗುಡ್‍ಬೈ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://twitter.com/sangeetha_bhat/status/1051431015250518016

Share This Article
Leave a Comment

Leave a Reply

Your email address will not be published. Required fields are marked *