ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್‌ಗೆ ಗುಡ್‌ಬೈ – ಕಂಗನಾ

Public TV
2 Min Read

– ವರ್ಷದ ಸಂಸದೆ ಪ್ರಶಸ್ತಿ ಪಡೆದರೆ, ಅದೇ ಸಾರ್ಥಕ ಎಂದ ನಟಿ

ಶಿಮ್ಲಾ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮಂಡಿ ಕ್ಷೇತ್ರದಿಂದ ಗೆದ್ದರೆ ಬಾಲಿವುಡ್‌ಗೆ ವಿದಾಯ ಹೇಳುತ್ತೇನೆ ಎಂದು ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ನಟಿ ಕಂಗನಾ ರಣಾವತ್‌ (Kangana Ranaut) ಘೋಷಣೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣ ಮುಕ್ತಾಯಗೊಳಿಸುತ್ತೇನೆ. ಅನಂತರ ಹಂತ-ಹಂತವಾಗಿ ಬಾಲಿವುಡ್‌ಗೆ (Bollywood) ವಿದಾಯ ಹೇಳುತ್ತೇನೆ. ಬಹಳ ಜನ ನಿರ್ಮಾಪಕರು ಹೇಳ್ತಾರೆ ನಿಮ್ಮಲ್ಲಿ ಒಳ್ಳೆಯ ನಾಯಕಿ ಇದ್ದಾರೆ. ದಯವಿಟ್ಟು ನಟನೆ ಬಿಡಬೇಡಿ ಎಂದು ಕೇಳಿಕೊಂಡಿದ್ದಾರೆಂಬುದಾಗಿಯೂ ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿ, ನನಗೆ ಈವರೆಗೆ ಹಲವಾರು ರಾಷ್ಟ್ರಪ್ರಶಸ್ತಿ, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಆದ್ರೆ ಮುಂಬರುವ ಸಮಯದಲ್ಲಿ ವರ್ಷದ ಸಂಸದ ಪ್ರಶಸ್ತಿ ಪಡೆದರೆ, ಅದೇ ನನಗೆ ಸಾರ್ಥಕ. ನಮ್ಮ ಪಕ್ಷದಲ್ಲಿ ನಮ್ಮ ಭರವಸೆಗಳು, ಮೋದಿಯವರ ಗ್ಯಾರಂಟಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆದ್ರೆ ಇತರ ಪಕ್ಷಗಳಲ್ಲಿ ನಮ್ಮಷ್ಟು ಕಟ್ಟುನಿಟ್ಟಾದ ಶಿಷ್ಟಾಚಾರ ಹೊಂದಿರುವುದನ್ನು ನಾನು ನೋಡಿಲ್ಲ. ಆದ್ದರಿಂದ ರಾಜಕೀಯ ರಂಗದಲ್ಲಿ ಸೇವೆ ಮಾಡಬೇಕು ಅನ್ನೋದು ನನ್ನ ಮುಂದಿನ ಗುರಿಯಾಗಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮಂಡಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಕಂಗನಾ, ತಮ್ಮ ಆಸ್ತಿ ಮೌಲ್ಯವನ್ನೂ ಘೋಷಿಸಿಕೊಂಡಿದ್ದರು. ಚಿನ್ನಾಭರಣ, ಕಾರು, ಸ್ಥಿರಾಸ್ತಿ ಸೇರಿದಂತೆ 91 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಲ್ಲದೇ 17 ಕೋಟಿ ರೂ. ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.

Share This Article