ಹೊರನಾಡ ಕನ್ನಡಿಗರ ಹೊಸತನದ ಉದ್ದಿಶ್ಯ!

Public TV
1 Min Read

ಕೆಲಸದ ನಿಮಿತ್ತವಾಗಿ ವಿದೇಶಕ್ಕೆ ಹೋದರೂ ಕನ್ನಡ ಸಿನಿಮಾ ಧ್ಯಾನದಲ್ಲಿಯೇ ಅಣಿಗೊಳ್ಳುತ್ತಿದ್ದವರು ಹೇಮಂತ್ ಕೃಷ್ಣಪ್ಪ. ಹಾಗೆ ಎಂಟು ವರ್ಷಗಳ ಕಾಲ ಯುಎಸ್‍ನಲ್ಲಿ ವಾಸವಿದ್ದುಕೊಂಡು ಅಲ್ಲಿಯೇ ಕಿರುಚಿತ್ರಗಳ ಮೂಲಕ ಅನುಭವ ಪಡೆದುಕೊಂಡಿದ್ದ ಹೇಮಂತ್ ಈಗ ನಿರ್ಮಾಪಕರಾಗಿ, ನಟರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಹಾಗೆ ಹೇಮಂತ್ ಅವರು ಅಡಿಯಿರಿಸಿರುವುದು ಉದ್ದಿಶ್ಯ ಎಂಬ ಚಿತ್ರದ ಮೂಲಕ. ಈ ಚಿತ್ರವೀಗ ತನ್ನ ವಿಶಿಷ್ಟವಾದ ಶೀರ್ಷಿಕೆಯ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆ ನೋಡಿದರೆ ಇದು ಕಲಾತ್ಮಕ ಚಿತ್ರವಾ ಎಂಬ ಅನುಮಾನವೂ ಹುಟ್ಟುವಂತಿದೆ. ಆದರೆ ನಿರ್ದೇಶಕ ಹೇಮಂತ್ ಅವರೇ ಇದು ಖಂಡಿತಾ ಕಲಾತ್ಮಕ ಚಿತ್ರವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ. ಆದರೆ ಇದು ಕನ್ನಡದ ಮಟ್ಟಿಗೆ ಹೊಸಾ ಥರದ ಚಿತ್ರ ಎಂಬುದು ಹೇಮಂತ್ ಅವರ ಭರವಸೆಯ ಮಾತು!

ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆ ಬರೆದಿರುವವರು ಹಾಲಿವುಡ್ ಕಥೆಗಾರ ರಾಬರ್ಟ್ ಗ್ರಿಫಿನ್. ಯುಎಸ್ ನಲ್ಲಿದ್ದುಕೊಂಡು ಸಿನಿಮಾ ವಾತಾವರಣದಲ್ಲಿ ಬೆರೆತಿದ್ದ ಹೇಮಂತ್ ಅವರಿಗೆ ಹಾಲಿವುಡ್ಡಿನ ಚಿತ್ರ ಬರಹಗಾರರ ಜೊತೆಗೆ ನಿಕಟವಾದ ನಂಟಿದೆ. ಆದ್ದರಿಂದಲೇ ಗ್ರಿಫಿನ್ ಅವರ ಕಥೆ ಓದಿ ಪ್ರಭಾವಿತರಾಗಿ ಅದರ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಒಂದೂವರೆ ವರ್ಷಗಳ ಕಾಲ ಈ ಕಥೆಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಕಡೆಗೂ ಅದಕ್ಕೆ ಸಿನಿಮಾ ರೂಪ ನೀಡಿದ್ದಾರೆ.

ಶೇಡ್ರಾಕ್ ಸಾಲೋಮನ್ ಸಂಗೀತ ಮತ್ತು ಚೇತನ್ ರಘುರಾಮ್ ಛಾಯಾಗ್ರಹಣ ಇರೋ ಈ ಚಿತ್ರ ಇದೇ ತಿಂಗಳ ಮೂವತ್ತೊಂದರಂದು ತೆರೆ ಕಾಣಲಿದೆ. ಕನ್ನಡದಲ್ಲಿ ಸಾಕಷ್ಟು ಥ್ರಿಲ್ಲರ್ ಕಥಾನಕಗಳು ಬಂದಿದ್ದರೂ ಉದ್ದಿಶ್ಯ ಚಿತ್ರ ಕನ್ನಡಕ್ಕೆ ಹೊಸ ಆಹ್ಲಾದವೊಂದನ್ನು ಖಂಡಿತಾ ಪರಿಚಯಿಸಲಿದೆ. ಆ ಮೂಲಕ ದೊಡ್ಡ ಮಟ್ಟದ ಗೆಲುವನ್ನೂ ಈ ಚಿತ್ರ ಪಡೆದುಕೊಳ್ಳಲಿದೆ ಎಂಬ ಭರವಸೆ ನಿರ್ದೇಶಕ, ನಿರ್ಮಾಪಕರಾದ ಹೇಮಂತ್ ಕೃಷ್ಣಪ್ಪ ಅವರದ್ದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *