– ಆಪರೇಷನ್ ಇಲ್ಲ, ಡೆಲಿವರಿಯೂ ಇಲ್ಲ. ಎಲ್ಲಾ ಸುಳ್ಳು
– ಮನೆ ಬಿಟ್ಟು ಹೋಗ್ತಾರಾ?
ಬೆಂಗಳೂರು: ಕೊಪ್ಪಳ ಜಿಲ್ಲೆಯ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರ್ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಎಲ್ಲ ಊಹಾಪೋಹಗಳಿಗೂ ಶಾಸಕರು ಸ್ಪಷ್ಟನೆ ನೀಡಿ ತೆರೆ ಎಳೆದಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ಆಪರೇಷನ್ ಹಸ್ತಕ್ಕೆ ಒಳಗಾಗಿದ್ದೇನೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಯಾವ ಆಪರೇಷನ್ ಇಲ್ಲ, ಡೆಲಿವೆರಿಯೂ ಇಲ್ಲ. ಎಲ್ಲ ಸುದ್ದಿಗಳು ಸುಳ್ಳು. 2018ರ ಆಗಸ್ಟ್ ನಲ್ಲಿ ನಾನು ಮತ್ತು ಸಚಿವ ವೆಂಕಟರಾವ್ ನಾಡಗೌಡರ ಜೊತೆಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಫೋಟೋ ಇಂದು ವೈರಲ್ ಆಗಿದೆ. ಅಂದು ನಮ್ಮ ಭಾಗಕ್ಕೆ 7 ಗಂಟೆ ನೀಡುತ್ತಿದ್ದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದಾಗಿ ರೈತರ ಬೆಳೆಗಳು ನೀರಿಲ್ಲದೆ ಒಣಗಿತ್ತು. ಹಾಗಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೆ ಎಂದರು.
ಸ್ನೇಹಿತನ ಜೊತೆ ಮೈಸೂರಿಗೆ ಹೋಗಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದು ಕ್ಷೇತ್ರದ ಅಭಿವೃದ್ಧಿಯ ಕೆಲಸಗಳಿಗೆ ಸಂಬಂಧಿಸಿದಂತೆ ಕಚೇರಿಯಿಂದ ಕಚೇರಿಗೆ ತಿರುಗಾಡುತ್ತಿದ್ದೇನೆ. ಯಾವ ಕಾಂಗ್ರೆಸ್-ಜೆಡಿಎಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೂ ನಾನು ಬಿಜೆಪಿ ಬಿಟ್ಟು ಬರಲ್ಲ ಎಂದು ಹೇಳುತ್ತೇನೆ ಎಂದು ಬಸವರಾಜ್ ದಡೇಸುಗೂರ್ ಸ್ಪಷ್ಟಪಡಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯದ ಮುಖ್ಯಮಂತ್ರಿ, ಸಚಿವರನ್ನು ಭೇಟಿಯಾಗಬೇಕು. ಪ್ರತಿ ಭೇಟಿಗೂ ಬೇರೆ ಅರ್ಥ ಕಲ್ಪಿಸಬಾರದು. ಕಳೆದ ಬಾರಿ ನಮ್ಮ ಮನವಿಗೆ ಸ್ಪಂದಿಸಿದ ಸಿಎಂ ಮತ್ತು ಸಚಿವರು ವಿದ್ಯುತ್ ಮತ್ತು ಅನುದಾನ ನೀಡಿದರು. ಯಡಿಯೂರಪ್ಪನವರು ನನ್ನ ಮೇಲೆ ನಂಬಿಕೆ ಹೊಂದಿದ್ದು, ನಾನು ಪಕ್ಷ ಬಿಟ್ಟು ಹೋಗಲ್ಲ ಎಂಬ ವಿಶ್ವಾಸವನ್ನು ಪಕ್ಷದ ರಾಜ್ಯಾಧ್ಯಕ್ಷರು ಹೊಂದಿದ್ದಾರೆ ಎಂದು ತಿಳಿಸಿದರು.