ಕಮಲ್ ಹಾಸನ್‌ಗೆ ಇನ್ಮುಂದೆ ಕರ್ನಾಟಕಕ್ಕೆ ಪ್ರವೇಶವಿಲ್ಲ – ಕರವೇ ನಾರಾಯಣಗೌಡ ಕಿಡಿ

Public TV
2 Min Read

ಬೆಂಗಳೂರು: ಇನ್ಮುಂದೆ ಕಮಲ್ ಹಾಸನ್‌ಗೆ ಕರ್ನಾಟಕಕ್ಕೆ ಪ್ರವೇಶವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ (Narayana Gowda) ಹೇಳಿದ್ದಾರೆ.

`ಥಗ್‌ಲೈಫ್’ (Thug Life) ಸಿನಿಮಾ ರಿಲೀಸ್ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಮತ್ತು ನ್ಯಾಯಾಧೀಶರು ಕಮಲ್ ಹಾಸನ್‌ಗೆ ಸರಿಯಾದ ಪಾಠ ಕಲಿಸಿದ್ದಾರೆ. ನ್ಯಾಯಾಧೀಶರು ಕನ್ನಡಿಗರ ಭಾವನೆ, ಕನ್ನಡ ಜನರ ಕಳಕಳಿಯನ್ನ ಅರ್ಥ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ತೀರ್ಪು ಕೂಡ ಭಾಷಾ ವಿರೋಧಿಗಳಿಗೆ ತಕ್ಕ ಪಾಠ ಆಗಲಿದೆ ಎಂದರು.ಇದನ್ನೂ ಓದಿ: ಮೊದಲು ಕ್ಷಮೆ ಕೇಳಿ, ಜನರ ಭಾವನೆಗೆ ಧಕ್ಕೆ ತರಬೇಡಿ: ಕಮಲ್‌ಗೆ ಹೈಕೋರ್ಟ್‌ ಚಾಟಿ

5ನೇ ತಾರೀಖಿನಂದು ರಿಲೀಸ್ ಆಗಬೇಕಿದ್ದ ಸಿನಿಮಾ ಮಾತ್ರ ಅಲ್ಲ, ಇನ್ಮುಂದೆ ಕಮಲ್ ಹಾಸನ್ ಯಾವುದೇ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವುದಿಲ್ಲ. ಆಗಲು ನಾವು ಬಿಡುವುದಿಲ್ಲ. ಕ್ಷಮೆ ಕೇಳದೇ, ದುರಹಂಕಾರ ಮೆರೆದಿದ್ದಾರೆ. ಇನ್ನೂ ಕಮಲ್ ಹಾಸನ್ ಯಾವತ್ತೂ ಕರ್ನಾಟಕಕ್ಕೆ ಬರಲ್ಲ ಹಾಗೂ ಒಂದು ವೇಳೆ ಬಂದರೆ ನಾವು ತಡೆಯುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಭಾಷೆ ಹುಟ್ಟಿದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ? ಇಲ್ಲ ಇತಿಹಾಸಕಾರರೇ? ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. 350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ? ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆಯನ್ನು ಕೋರಿ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆ ಧಕ್ಕೆ ಆಗಬಾರದು. ಕೋಟ್ಯಂತರ ರೂ. ಹಾಕಿದ್ದೀರಿ. ಕರ್ನಾಟಕದಲ್ಲಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ? ಕರ್ನಾಟಕವನ್ನು ಬಿಟ್ಟು ಬಿಡಿ ಎಂದರು.

ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ? ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಒಂದು ವೇಳೆ ಇತಿಹಾಸಕಾರ ದಾಖಲೆ ಸಮೇತ ಹೇಳಿದರೆ ಚರ್ಚೆ ವಿಷಯ ಆಗುತ್ತಿತ್ತು. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಡ್ಜ್ ಖಡಕ್ ಆಗಿ ಸೂಚಿಸಿದರು.

ಏನಿದು ವಿವಾದ?
ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ಕುರಿತು ಇತ್ತೀಚಿಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಅವರು, ನಾನು ಹೇಳಿದ್ದು ನನ್ನ ಪ್ರಕಾರ ಸರಿ, ನಾನು ಕ್ಷಮೆ ಕೇಳಲ್ಲ ಎಂದು ಹೇಳಿದ್ದರು.

ಅದಾದ ಬಳಿಕ ಮತ್ತೆ ಮಾತನಾಡಿದ್ದ ಕಮಲ್ ಹಾಸನ್, ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದ ಮೇಲಿನ ನನ್ನ ಪ್ರೀತಿ ನಿಜ. ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ತಪ್ಪಾಗಿದ್ರೆ ಕ್ಷಮೆ ಕೇಳುವೆ, ನನ್ನಿಂದ ತಪ್ಪು ಆಗಿಲ್ಲ. ನನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು.ಇದನ್ನೂ ಓದಿ: ಕಮಲ್ ಹಾಸನ್‌ಗೆ ಇಂದು ನಿರ್ಣಾಯಕ ದಿನ – ಹೈಕೋರ್ಟ್‌ನಲ್ಲಿ ‘ಥಗ್‌ಲೈಫ್’ ಬಿಡುಗಡೆ ನಿರ್ಧಾರ

Share This Article