ಕಳಸಾ ಬಂಡೂರಿ ಯೋಜನೆಗೆ ವಿಘ್ನ ದೂರ- ಗೋವಾ ಫಾರ್ವರ್ಡ್ ಪಾರ್ಟಿಗೆ ಮುಖಭಂಗ

Public TV
1 Min Read

ನವದೆಹಲಿ: ಕಳಸಾ ಬಂಡೂರಿ ಯೋಜನೆಗೆ ಇದ್ದ ವಿಘ್ನಗಳು ದೂರಾಗಿವೆ. ಯೋಜನೆಗೆ ಖ್ಯಾತೆ ತೆಗೆದಿದ್ದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ)ಗೆ ಮುಖಭಂಗವಾಗಿದೆ.

ಮಹದಾಯಿ, ಕಳಸಾ-ಬಂಡೂರಿ ನಾಲೆಗಳ ತಿರುವು ಯೋಜನೆಗೆ ಅನುಮತಿ ನೀಡಿ ಕೇಂದ್ರ ಸರ್ಕಾರದ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಜಿಎಫ್‍ಪಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ಸಲ್ಲಿಸಿತ್ತು.

ಕರ್ನಾಟಕದಲ್ಲಿ ನಡೆಯಲಿರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಿದೆ. ಈ ಮೂಲಕ ಪರಿಸರ ರಕ್ಷಣೆಗಾಗಿ ಹೋರಾಡುತ್ತಿರುವ ಗೋವಾ ಪರ ನಿಲ್ಲದೆ ಕರ್ನಾಟಕ ಬೆಂಬಲ ನೀಡಿದೆ ಎಂದು ದೂರಿದ್ದರು. ಜೊತೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ದಾವಂತ್ ನೇತೃತ್ವದ ಸರ್ವ ಪಕ್ಷಗಳ ನಿಯೋಗವು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು.

ಕುಡಿಯುವ ನೀರಿಗಾಗಿ ಯೋಜನೆಯೇ ಹೊರತು ವಿದ್ಯುತ್ ಉತ್ಪಾದನೆಗಲ್ಲ. ಹಾಗಾಗಿ ಇಐಎ (ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‍ಮೆಂಟ್) ಅಗತ್ಯ ಇಲ್ಲ ಅಂತ ಅಕ್ಟೋಬರ್ 17ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹೇಳಿತ್ತು. ಆದರೆ ಕರ್ನಾಟಕ ವಿದ್ಯುತ್ ಉತ್ಪಾದನೆ ಮತ್ತು ನೀರಾವರಿಗೆ ಯೋಜನೆ ಮಾಡುತ್ತಿದೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ ದೂರಿತ್ತು.

ಈ ಸಂಬಂಧ ವಿಚಾರಣೆ ನಡೆಸಿ ಇಂದು ಅರ್ಜಿ ವಜಾಗೊಳಿಸಿರುವ ಹಸಿರು ನ್ಯಾಯಾಧೀಕರಣ, ಈ ಹಂತದಲ್ಲಿ ಅರ್ಜಿಯ ವಿಚಾರಣೆ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ಮೂಲಕ ಗೋವಾ ಫಾರ್ವರ್ಡ್ ಪಾರ್ಟಿಗೆ ಹಿನ್ನಡೆಯಾಗಿದೆ. ಇತ್ತ ಬೆಳಗಾವಿಯ ಖಾನಾಪೂರ ತಾಲೂಕಿನಲ್ಲಿ ಯೋಜನೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *