ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

Public TV
1 Min Read

ಕಲಬುರಗಿ: ಲಿಂಗೈಕ್ಯರಾದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರೇ ನಿರ್ಮಿಸಿಕೊಂಡಿರುವ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅನಾರೋಗ್ಯದಿಂದ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅವರನ್ನು ನೋಡಲು ತಡರಾತ್ರಿಯಿಂದಲೇ ಸಾವಿರಾರು ಭಕ್ತರು ಮಾಣಿಕ್ಯಗಿರಿ ಬೆಟ್ಟಕ್ಕೆ ಬರುತ್ತಿದ್ದಾರೆ. ಆಂಧ್ರ ಪ್ರದೇಶ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ಮಠದ ಮುಖ್ಯ ದ್ವಾರದ ಆವರಣದಲ್ಲಿ ವೇದಿಕೆಗೆ ಸಿದ್ಧತೆ ಮಾಡಿ 10 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಚಿಂತನೆ ಮಾಡಲಾಗಿದೆ.

ಮಾತಾ ಮಾಣಿಕೇಶ್ವರಿಯವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಹರಿದು ಬರುವ ನೀರಿಕ್ಷೆ ಇದ್ದು, ಜಿಲ್ಲಾಡಳಿತ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸಲಿದ್ದು, ಎರಡು ಸಾವಿರ ಪೊಲೀಸರು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಮಠದ ಅವರಣದಲ್ಲಿ ಹಾಕಿರುವ ವೇದಿಕೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ ಐದು ಗಂಟೆಗೆ ಅಮ್ಮನಿಗೆ ಮಠದ ಗುಹೆಯಲ್ಲಿ ಅರ್ಚಕರು ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದ್ದು, ಮಠದ ಆವರಣದಲ್ಲಿಯೇ ಇರುವ ಶಿವಲಿಂಗದ ಆಕಾರದ ಸಮಾಧಿಯಲ್ಲಿ ಅವರನ್ನು ಲಿಂಗೈಕ್ಯ ಮಾಡಲಾಗುತ್ತದೆ. ಈ ಸಮಾಧಿಯನ್ನು ಸ್ವತಃ ಮಾತಾ ಮಾಣಿಕೇಶ್ವರಿ ಅವರೇ ನಿರ್ಮಾಣ ಮಾಡಿಕೊಂಡಿದ್ದರು.

ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *