ಚಿತ್ತಾಪುರ ಆರ್‌ಎಸ್‌ಎಸ್ ಫೈಟ್‌ – ಕ್ರೈಸ್ತ ಸಂಘಟನೆ ಸೇರಿ ಐವರಿಂದ ಅರ್ಜಿ

Public TV
2 Min Read

– ಇಂದಿನ ಹೈಕೋರ್ಟ್ ಆದೇಶದತ್ತ ಚಿತ್ತ

ಕಲಬುರಗಿ: ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನ (Chittapur RSS Route March) ವಿಚಾರ ಹೈಕೋರ್ಟ್ (High Court) ಮೆಟ್ಟಿಲೇರಿದ್ದು ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಆರ್‌ಎಸ್‌ಎಸ್ ನ.2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ ಇತ್ತ 5 ಸಂಘಟನೆಗಳೂ ಅಂದೇ ನಮಗೂ ಅವಕಾಶ ಕೊಡಿ ಎಂದು ಅರ್ಜಿ ಹಾಕಿದೆ. ಈ ಮಧ್ಯೆ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ಮಧ್ಯಾಹ್ನ ಹೈಕೋರ್ಟ್‌ನಲ್ಲಿ (Kalaburagi High Court) ನಡೆಯಲಿದೆ.

ಆರ್‌ಎಸ್‌ಎಸ್‌ ಅಕ್ಟೋಬರ್ 19 ರಂದು ಪಥಸಂಚಲನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಆದರೆ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಮತ್ತು ಹಲವು ಸಂಘಟನೆಗಳು ಪಥಸಂಚಲನಕ್ಕೆ ಅನುಮತಿ ಕೋರಿದ್ದರಿಂದ ಚಿತ್ತಾಪುರ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಕಾನೂನು ಸುವ್ಯವಸ್ಥೆ ಕಾರಣ ನೀಡಿ ತಡೆ ನೀಡಿದ್ದರು.

ಅನುಮತಿ ನೀಡದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕಲಬುರಗಿ ಹೈಕೋರ್ಟ್‌ ಪೀಠದಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು. ಅರ್ಜಿ ಮಾನ್ಯ ಮಾಡಿದ ಹೈಕೋರ್ಟ್‌ ಇಂದಿಗೆ ವಿಚಾರಣೆ ಮುಂದೂಡಿ ಅನುಮತಿ ನೀಡುವ ಬಗ್ಗೆ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು. ವಿಚಾರಣೆಯ ಸಂದರ್ಭದಲ್ಲಿ ನ.2 ರಂದು ಪಥಸಂಚಲನಕ್ಕೆ ಅನುಮತಿ ನೀಡುವಂತೆ ಆರ್‌ಎಸ್‌ಎಸ್‌ ಮನವಿ ಮಾಡಿಕೊಂಡಿತ್ತು.

ಆರ್‌ಎಸ್‌ಎಸ್‌ ಅರ್ಜಿ ಸಲ್ಲಿಸುತ್ತಿದ್ದಂತೆ ಮತ್ತೊಂಡು ಕಡೆ ಭೀಮ್ ಆರ್ಮಿ, ದಲಿತ್ ಪ್ಯಾಂಥರ್ ಹಾಗೂ ಕುರುಬ ಸಮುದಾಯ ಅದೇ ದಿನ ಪ್ರತಿಭಟನೆಗೆ ಅರ್ಜಿ ಸಲ್ಲಿಸಿದೆ.

ಇನ್ನೊಂದು ಕಡೆ ನವೆಂಬರ್ 2 ರಂದೇ ಕೇಂದ್ರ ಸರ್ಕಾರದ ವಿರುದ್ದ ಅತೀವೃಷ್ಟಿ ಪರಿಹಾರಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಪಥಸಂಚಲನ ಮಾಡುತ್ತೇವೆ ಎಂದು ರಾಜ್ಯ ರೈತ ಸಂಘಟನೆ ಹಸಿರು ಸೇನೆ ಬಣ ಅರ್ಜಿ ಹಾಕಿದೆ.

ಸಂಘಟನೆಗಳ ಮಾತ್ರವಲ್ಲದೇ ರಾಜ್ಯ ಕ್ರಿಶ್ಚಿಯನ್ ವೆಲ್ಫೇರ್‌ ಸೊಸೈಟಿ ಸಹ ನಾವು ಪ್ರಾರ್ಥನಾ ನಡಿಗೆ ಮಾಡುತ್ತೇವೆ ಎಂದು ಅರ್ಜಿ ಸಲ್ಲಿಸಿದೆ. ಭಾನುವಾರ ನಾವು ಸಹಜವಾಗಿಯೇ ಪ್ರಾರ್ಥನೆ ಮಾಡುತ್ತೇವೆ. ನಾವು ಆರ್‌ಎಸ್‌ಎಸ್‌ ವಿರುದ್ಧವಾಗಿ ಈ ನಡಿಗೆ ಮಾಡುತ್ತಿಲ್ಲ.ಬದಲಾಗಿ ಶಾಂತಿ ಸುವ್ಯಸಸ್ಥೆಯ ಬಗ್ಗೆ ಅರಿವು ಮೂಡಿಸುತ್ತೇವೆ ಎಂದು ಹೇಳಿದೆ.

ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಆರ್ಜಿ ಸಲ್ಲಿಸುತ್ತಿದ್ದಂತೆ ಉಳಿದವರು ಜಿದ್ದಿಗೆ ಬಿದ್ದವರಂತೆ ಅರ್ಜಿ ಸಲ್ಲಿಸಿದ್ದಾರೆ. ಆ ಎಲ್ಲಾ ಅರ್ಜಿಗಳ ವಿಚಾರಣೆ ಇಂದು ನ್ಯಾಯಾಲಯದ ಮುಂದೆ ಬರುತ್ತಿವೆ. ಹೀಗಾಗಿ ಎಲ್ಲರ ಚಿತ್ತ ಇಂದು ಮಧ್ಯಾಹ್ನ 3:30ರ ಕೋರ್ಟ್ ಕಲಾಪದತ್ತ ನೆಟ್ಟಿದೆ.

Share This Article