ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಮಹಾದೇವ ಅಂತ್ಯಕ್ರಿಯೆ

Public TV
2 Min Read

ಕಲಬುರಗಿ: ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ ಹುತಾತ್ಮರಾಗಿದ್ದ ಸಿಆರ್‍ಪಿಎಫ್ ಯೋಧ ಮಹಾದೇವ ಪೊಲೀಸ್ ಪಾಟೀಲ್ ಅವರ ಅಂತ್ಯಕ್ರಿಯೆ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದಲ್ಲಿ ಇಂದು ನೆರವೇರಿತು.

ಮಹಾದೇವ ಅವರ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವ ಹಾಗೂ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಸಂಸದ ಡಾ.ಉಮೇಶ್ ಜಾಧವ್, ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್, ಎಸ್‍ಪಿ ಯಡಾ ಮಾರ್ಟನ್ ಸೇರಿದಂತೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯೋಧ ಮಹಾದೇವ ಅವರಿಗೆ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಮಹಾದೇವ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಅಂತ್ಯಕ್ರಿಯೆ ಸ್ಥಳಕ್ಕೆ ತರಲಾಯಿತು. ಈ ವೇಳೆ ಶಾಲೆ ಮಕ್ಕಳು ‘ಮಹಾದೇವ ಪಾಟೀಲ್ ಅಮರ್ ರಹೇ’, ವಂದೇ ಮಾತರಂ ಎಂದು ಘೋಷಣೆ ಕೂಗಿದರು. ಹುತಾತ್ಮ ಮಹಾದೇವ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದು, ಮಹಾದೇವ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು. ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸೌಲಭ್ಯ ನೀಡಲಾಗುವುದು. ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು.

ಸಂಸದ ಡಾ.ಉಮೇಶ್ ಜಾಧವ್ ಅವರು, ಯೋಧ ಮಹಾದೇವ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಒದಗಿಸುವ ಭರವಸೆ ನೀಡಿದರು.

ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯ ಕೇಶ್ಕುತಲ್ ಬಳಿ ಶುಕ್ರವಾರ ಮಹಾದೇವ ಸೇರಿದಂತೆ, ಮೂರು ಯೋಧರು ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದರು. ಮಹಾದೇವ ಅವರು ಕಳೆದ 29 ವರ್ಷಗಳಿಂದ ಸಿಆರ್‍ಪಿಎಫ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಎಸ್‍ಐ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೈದ್ರಾಬಾದ್ ಸಿಆರ್‍ಪಿಎಫ್ ಕೇಂದ್ರದಲ್ಲಿ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಮೂರು ತಿಂಗಳ ಹಿಂದೆಯಷ್ಟೇ ಛತ್ತೀಸ್‍ಗಢಕ್ಕೆ ವರ್ಗಾವಣೆ ಮಾಡಲಾಗಿತ್ತು.

ಮಹಾದೇವ ಅವರಿಗೆ ಒಟ್ಟು ಮೂರು ಜನ ಮಕ್ಕಳಿದ್ದು, ಓರ್ವ ಪುತ್ರಿಯ ವಿವಾಹವಾಗಿದೆ. ಉಳಿದ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದುರಂತವೆಂದರೆ ಜುಲೈ 1 ರಂದು ಮಗಳಿಗೆ ಸೀಮಂತ ಕಾರ್ಯ ಮಾಡಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮಹಾದೇವ ಅವರು ಶುಕ್ರವಾರ ಸಂಜೆ ಛತ್ತೀಸ್‍ಗಢದಿಂದ ಕಲಬುರಗಿಗೆ ಬರುವುದಕ್ಕೆ ರಜೆ ಸಹ ಪಡೆದಿದ್ದರು. ಆದರೆ ವಿಧಿಯಾಟವೇ ಬೇರೆಯಾದ ಹಿನ್ನಲೆ ಮಗಳ ಸೀಮಂತ ಕಾರ್ಯಕ್ಕೆ ಬರಬೇಕಾದ ಅವರು ಹುತಾತ್ಮರಾಗಿ ಗ್ರಾಮಕ್ಕೆ ಆಗಮಿಸಿದರು.

Share This Article
Leave a Comment

Leave a Reply

Your email address will not be published. Required fields are marked *