ಕಲಬುರಗಿ | ಪೋಕ್ಸೊ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ

Public TV
1 Min Read

ಕಲಬುರಗಿ: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಅಪರಾಧಿ ಯುವಕನನ್ನು ಆಳಂದ (Alanda) ತಾಲ್ಲೂಕಿನ ದೇವಂತಗಿ ಗ್ರಾಮದ ಗುಂಡೇರಾವ ಚೋಪಡೆ (28) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕರ್ನಾಟಕದ ನಾಲ್ವರು ಜಡ್ಜ್‌ಗಳ ವರ್ಗಾವಣೆಗೆ ಶಿಫಾರಸು

2023ರ ಜು.15ರಂದು ಆಳಂದ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಪುಸ್ತಕವೊಂದನ್ನು ತರಲು ಮತ್ತೊಂದು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಅಪರಾಧಿ ಗುಂಡೇರಾವ ಬಾಲಕಿಯನ್ನು ಬಲವಂತವಾಗಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಪಕ್ಕದ ಹೊಲದಲ್ಲಿದ್ದ ಬಾವಿಯೊಂದರಲ್ಲಿ ಶವವನ್ನು ಬೀಸಾಡಿ ಹೋಗಿದ್ದ. ಈ ಕುರಿತು ಆಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖಾಧಿಕಾರಿ ಭಾಸು ಚವ್ಹಾಣ ನೇತೃತ್ವದಲ್ಲಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಪೋಕ್ಸೊ ಕಾಯ್ದೆಯಡಿ ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ, ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಕಾನೂನು ಪ್ರಾಧಿಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಮೃತ ಬಾಲಕಿಯ ತಾಯಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.

ನಿಂಬರ್ಗಾ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವು ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಇದನ್ನೂ ಓದಿ: ನೆಲಕ್ಕೆ ಬಿದ್ರೂ ಬಿಡದೆ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ವಿಂಗ್ ಕಮಾಂಡರ್ ದರ್ಪ

Share This Article