ಕೊರೊನಾ ವಿರುದ್ಧ ಗೆದ್ದ ಕಲಬುರಗಿ-ಮಹಾಮಾರಿಗೆ ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ?

Public TV
1 Min Read

-ಆರಂಭದಲ್ಲಿ ಎಡವಿದ್ದ ಕಲಬುರಗಿ ಈಗ ರಾಜ್ಯಕ್ಕೆ ಮಾದರಿ

ಕಲಬುರಗಿ: ಭಾರತದಲ್ಲಿ ಮೊದಲು ಕೊರೊನಾ ವೈರಸ್ ಕಲಬುರಗಿ ವೃದ್ಧನೋರ್ವನನ್ನು ಬಲಿ ಪಡೆದುಕೊಂಡಿತ್ತು. ಆರಂಭದಲ್ಲಿ ಎಡವಿದ್ದ ಕಲಬುರಗಿ ಜಿಲ್ಲಾಡಳಿತ ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಲಬುರಗಿ ಅನುಸರಿಸಿದ ನಿಯಮಗಳನ್ನು ಇನ್ನುಳಿದ ಜಿಲ್ಲಾಡಳಿತ ಫಾಲೋ ಮಾಡಬೇಕೆಂಬ ಸೂಚನೆ ಸಹ ನೀಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸಿದೆ.

ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ? ದೇಶದಲ್ಲಿ ಮೊದಲ ಸಾವಾದರೂ ಕಲಬುರಗಿ ಜಿಲ್ಲಾಡಳಿತ ಪರಿಸ್ಥಿತಿ ಸಮರ್ಥವಾಗಿ ನಿರ್ವಹಣೆ ಮಾಡಿತು. ಮೊದಲ ಪ್ರಕರಣವಾಗಿದ್ದರಿಂದ ದೇಶದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಲಾಕ್‍ಡೌನ್ ಮಾಡಲಾಗಿತ್ತು. ಇಡೀ ಕಲಬುರಗಿ ಜಿಲ್ಲೆಯಲ್ಲಿಯೇ 144 ಸೆಕ್ಷನ್ ಜಾರಿಗೆಗೆ ತರಲಾಗಿತ್ತು. ತಜ್ಞರ ಜೊತೆ ಚರ್ಚಿಸಿ ಅಧಿಕಾರಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಕೊರೊನಾ ಜಾಗೃತಿ ಕುರಿತು ರಸ್ತೆಗಳಲ್ಲಿ ಫ್ಲೆಕ್ಸ್ ಹಾಕಲಾಗಿತ್ತು.

ಪೊಲೀಸ್ ಕಣ್ಗಾವಲು: ವಿದೇಶದಿಂದ ಬಂದಿದ್ದ ಒಟ್ಟು 3500 ಮಂದಿಯ ಮೇಲೆ ನಿಗಾ ಇಡಲು ಎಲ್ಲರ ಮನೆಗಳಿಗೂ ಹೋಂಗಾರ್ಡ್ ಸೇರಿದಂತೆ ಪೊಲೀಸ್ ಸಿಬ್ಬಂದಿಯ ಕಾವಲು ಹಾಕಲಾಗಿತ್ತು. ಕ್ವಾರಂಟೈನ್ ಆದವರು ಮನೆ ಬಿಟ್ಟು ಹೊರಬಾರದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಹೋಮ್ ಕ್ವಾರಂಟೈನ್ ಆದವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಹೋಮ್ ಕ್ವಾರಂಟೈನ್ ಗೆ ಒಳಪಟ್ಟವರು ಮನೆಯಿಂದ ಯಾರೇ ಹೊರಬಂದ್ರೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

ಜಿಲ್ಲಾಮಟ್ಟದಲ್ಲಿ ಕಮಿಟಿಗಳನ್ನು ರಚನೆ ಮಾಡಿ, ಅಧಿಕಾರಿಗಳನ್ನು ಒಟ್ಟುಗೂಡಿಸಿ ಟೀಮ್ ರಚಿಸಲಾಗಿತ್ತು. ಈ ತಂಡಗಳ ಮೂಲಕ ಜಿಲ್ಲಾಡಳಿತ ಕೊರೊನಾ ವಿರುದ್ಧದ ಯುದ್ಧಕ್ಕೆ ಇಳಿದಿತ್ತು. ಮುಂಜಾಗ್ರತ ಕ್ರಮವಾಗಿ 5 ಸಾವಿರ ಬೆಡ್ ಗಳನ್ನು ಸಿದ್ಧ ಮಾಡಿಕೊಂಡಿತ್ತು. ಕಲಬುರಗಿಗೆ ಯಾರ ಪ್ರವೇಶವೂ ಇಲ್ಲ. ಯಾರು ಕಲಬುಗಗಿ ಬಿಟ್ಟು ಹೋಗುವ ಹಾಗಿಲ್ಲ ಅನ್ನುವ ನಿಯಮವನ್ನು ಜಿಲ್ಲಾಡಳಿಯ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಕಂಪ್ಲೀಟ್ ಲಾಕ್‍ಡೌನ್‍ನಿಂದ ಕೊರೋನಾ ಸೋಂಕು ತಡೆಯುವಲ್ಲಿ ಕಲಬುರಗಿ ಯಶಸ್ವಿಯಾಗಿದ್ದು, ಕಳೆದ 12 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *