ಪತ್ನಿಯನ್ನ ಕೊಲೆಗೈದು, ಮೂರು ದಿನ ಶವದ ಜೊತೆಗೆ ಮಲಗಿದ್ದ ಪತಿ ಅರೆಸ್ಟ್

Public TV
2 Min Read

ಕಲಬುರಗಿ: ಪತಿಯೊಬ್ಬ ತನ್ನ ಪತ್ನಿಯನ್ನ ಕೊಲೆಗೈದು ಮೃತದೇಹವನ್ನು ಮಂಚದ ಕೆಳಗೆ ಮೂರು ದಿನ ಮುಚ್ಚಿಟ್ಟಿದ್ದ ಅಮಾನವೀಯ ಘಟನೆ ಆಳಂದ ತಾಲೂಕಿನಲ್ಲಿ ನಡೆದಿದೆ.

ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಸಂಗೀತಾ ಸಕ್ಕರಗಿ (35) ಕೊಲೆಯಾದ ಪತ್ನಿ. ಶ್ರೀಶೈಲ್ ಸಕ್ಕರಗಿ (45) ಕೊಲೆಗೈದ ಪಾಪಿ ಪತಿ. ಮಾದನಹಿಪ್ಪರಗಾ ಗ್ರಾಮದ ಮನೆಯಲ್ಲಿ ಶ್ರೀಶೈಲ್ ಶನಿವಾರ ಕೃತ್ಯ ಎಸಗಿದ್ದಾನೆ. ಶವ ಕೊಳೆತ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಶ್ರೀಶೈಲ್ 15 ವರ್ಷಗಳ ಹಿಂದೆಯೇ ಸಂಗೀತಾಳನ್ನು ಮದುವೆಯಾಗಿದ್ದರು. ಮಾದನಹಿಪ್ಪರಗಾ ಗ್ರಾಮದಲ್ಲಿ ಇಬ್ಬರು ಕೂಲಿ ಮಾಡಿಕೊಂಡು ಸಂತೋಷವಾಗಿದ್ದರು. ಮದುವೆಯಾಗಿ 15 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎನ್ನುವ ಕೊರಗು ದಂಪತಿಗೆ ಇತ್ತು. ಇತ್ತೀಚಗೆ ಶ್ರೀಶೈಲ್ ಅದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಸಂಬಂಧ ಬೆಳೆಸಿದ್ದ. ಇವರಿಬ್ಬರ ಸಂಬಂಧ ಸಂಗೀತಾಳಿಗೆ ಗೊತ್ತಿದ್ದರು ಕೂಡ ಗೊತ್ತಿಲ್ಲದಂತೆ ಇದ್ದಳು. ಅದನ್ನೇ ದುರುಪಯೋಗಪಡಿಸಿಕೊಂಡಿದ್ದ ಪಾಪಿ ಪತಿ ಶ್ರೀಶೈಲ ಪ್ರತಿನಿತ್ಯ ಮದ್ಯ ಕುಡಿದು ಮನೆಗೆ ಬಂದು ಸಂಗೀತಾಳಿಗೆ ಚಿತ್ರಹಿಂಸೆ ಕೊಡುತ್ತಿದ್ದ. ಶನಿವಾರವೂ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಶ್ರೀಶೈಲ್ ಹೆಂಡತಿಯೊಂದಿಗೆ ಗಲಾಟೆ ಮಾಡಲು ಶುರು ಮಾಡಿದ್ದ. ಬಳಿಕ ಜಗಳ ವಿಕೋಪಕ್ಕೆ ತೆರಳಿ ಹೆಂಡತಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಸಂಗೀತಾಳನ್ನು ಕೊಲೆ ಮಾಡಿದ ಪಾಪಿ ಪತಿ ಆಕೆಯ ಮೃತದೇಹವನ್ನು ಮೂಟೆಕಟ್ಟಿ ತನ್ನ ಮನೆಯ ಮಂಚದ ಕೆಳಗೆ ಬಚ್ಚಿಟ್ಟಿದ್ದ. ಬಳಿಕ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಶ್ರೀಶೈಲ್ ಇದ್ದ. ದುರಂತವೆಂದರೆ ಮನೆಯಲ್ಲೇ ಪತ್ನಿಯ ಶವವನ್ನು ಇಟ್ಟು ತನ್ನದೆ ಗ್ರಾಮದಲ್ಲಿ ಸಾವನ್ನಪ್ಪಿದ್ದ ಮತ್ತೊಬ್ಬನ ಅಂತ್ಯಸಂಸ್ಕಾರಕ್ಕೆ ತೆರಳಿ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಮನೆಗೆ ಬಂದು ಸ್ನಾನ ಮಾಡಿದ್ದ. ಅಷ್ಟೇ ಅಲ್ಲದೆ ಆರೋಪಿಯು ತನ್ನ ಪತ್ನಿಯ ಶವದ ಜೊತೆಗೆ ಮನೆಯಲ್ಲೆ ಮೂರು ದಿನ ಮಲಗಿದ್ದ.

ಸಂಗೀತಾ ಮೂರು ದಿನಗಳಿಂದ ಕಾಣದೆ ಇರುವುದರಿಂದ ಶ್ರೀಶೈಲ್‌ನನ್ನು ಅಕ್ಕ ಪಕ್ಕದ ಮನೆಯವರು ವಿಚಾರಿಸಿದ್ದರು. ಆದರೆ ಆರೋಪಿಯು, ಪತ್ನಿ ತವರು ಮನೆಗೆ ಹೋಗಿದ್ದಾಳೆ ಎಂದು ಕತೆ ಕಟ್ಟಿದ್ದ. ಅದಾದ ಬಳಿಕ ಮನೆಯಿಂದ ಮೃತದೇಹ ಕೊಳೆತ ವಾಸನೆ ಬರಲು ಆರಂಭಿಸಿತು. ಇದಕ್ಕೆ ಮತ್ತೊಂದು ಕತೆ ಕಟ್ಟಿದ ಶ್ರೀಶೈಲ್, ತಾನು ಮದ್ಯ ಕುಡಿದು ಮನೆಯಲ್ಲೇ ವಾಂತಿ ಮಾಡಿಕೊಂಡಿರುವುದಾಗಿ ಹೇಳಿದ್ದ. ಆರೋಪಿಯ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ ಸ್ಥಳೀಯರು ಮಂಗಳವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಸಂಗೀತಾ ಮೃತದೇಹ ಪತ್ತೆಯಾಗಿದೆ.

ಈ ಸಂಬಂಧ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶ್ರೀಶೈಲ್‌ನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *