ಗುಂಡಿ ಮಧ್ಯೆ ರಸ್ತೆ ಎಲ್ಲಿದೆ – ಕಿತ್ತು ಹೋಗಿದೆ ಕೈಗಾ, ಇಳಕಲ್ ಹೆದ್ದಾರಿ

By
1 Min Read

– ಅನಾಹುತ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ
– ಹಾಳಾದ ಹೈವೇ, ಗರ್ಭಿಣಿಯರಿಗೆ ರಸ್ತೆಯಲ್ಲೇ ಡೆಲಿವರಿ

ಗದಗ: ಗದಗ ಜಿಲ್ಲೆಯಲ್ಲಿ ಹಾದುಹೋಗುವ ಕಾರವಾರದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ 85 ಪರಿಸ್ಥಿತಿ ಅಯೋಮಯವಾಗಿದೆ.

ಗದಗನಿಂದ ಗಜೇಂದ್ರಗಢವನ್ನು ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಾಜ್ಯ ಹೆದ್ದಾರಿ ಕಾರವಾರದ ಕೈಗಾ ದಿಂದ ಹಾನಗಲ್, ಪಾಲಾ, ಬಂಕಾಪೂರ, ಲಕ್ಷ್ಮೇಶ್ವರ, ಗದಗ, ಗಜೇಂದ್ರಗಢ ಮಾರ್ಗವಾಗಿ ಇಳಕಲ್ ಸೇರುತ್ತದೆ. ಕಳೆದ ಎರಡು ವರ್ಷದಿಂದ ಈ ಇದು ತುಂಬಾ ಅಪಾಯಕಾರಿ ರಸ್ತೆಯಾಗಿದ್ದು, ಗುಂಡಿ ಮಧ್ಯೆ ರಸ್ತೆ ಎಲ್ಲಿದೆ ಎಂದು ಹುಡುಕಾಡುವಂತಾಗಿದೆ.

ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅದರಲ್ಲೂ ಲಕ್ಷ್ಮೇಶ್ವರ ದಿಂದ ಗದಗ, ಗಜೇಂದ್ರಗಢ ತಲುಪಬೇಕಾದಲ್ಲಿ ಯುದ್ಧದಲ್ಲಿ ಗೆದ್ದು ಬಂದಂತಾಗುತ್ತದೆ. ಅನಾರೋಗ್ಯಕ್ಕಿಡಾದವರು, ಗರ್ಭಿಣಿಯರು ಈ ರಸ್ತೆನಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಹಗಲಿನಲ್ಲೆ ವಾಹನಗಳು ರಸ್ತೆ ತುಂಬೆಲ್ಲ ಇತ್ತಿಂದ ಅತ್ತ, ಅತ್ತಿಂದ ಇತ್ತ ಸರ್ಕಸ್ ಮಾಡುತ್ತಾ ಚಲಿಸುತ್ತಿವೆ.

ಅಪರಿತರು ರಾತ್ರಿ ಈ ರಸ್ತೆಯಲ್ಲಿ ಸಂಚರಿಸಿ ಸೊಂಟ, ಕೈಕಾಲು ಮುರಿದುಕೊಂಡಿರುವ ಅದೆಷ್ಟೋ ಪ್ರಕರಣಗಳಿವೆ. ಇತ್ತೀಚಿಗಷ್ಟೆ ನರೇಗಲ್ ನಿಂದ ಗದಗ ಆಸ್ಪತ್ರೆಗೆ ಗರ್ಭಿಣಿ ಕರೆತರುವಾಗ ರಸ್ತೆ ಮಧ್ಯೆಯೇ ಹೆರಿಗೆಯಾಗಿರುವ ಉದಾಹರಣೆಯೂ ಇದೆ. ಒಂದು ಗುಂಡಿ ತಪ್ಪಿಸಬೇಕಾದಲ್ಲಿ ಮುಂದೆ ಮತ್ತೆರಡು ಗುಂಡಿಗಳು ಎದುರಾಗುತ್ತವೆ. ಹೀಗಾಗಿ ಈ ರಸ್ತೆನಲ್ಲಿ ಸಾಕಷ್ಟು ಅಪಘಾತಗಳು, ಜೊತೆಗೆ ರಾತ್ರಿ ವೇಳೆ ದರೋಡೆ ಕೂಡಾ ನಡೆಯುತ್ತದೆ. ತಗ್ಗುಗಳಿವೆ ಎಂದು ರಾತ್ರಿ ವೇಳೆ ವಾಹನ ನಿಧಾನ ಮಾಡಿದರೆ ಯಾರು ಇಲ್ಲದ್ದನ್ನು ಗಮನಿಸಿ ದಾಳಿ ಮಾಡಿ ದರೋಡೆ ಮಾಡುತ್ತಾರೆ ಎಂಬ ದೂರು ಸಹ ಕೇಳಿಬಂದಿದೆ.

ಎರಡು ವರ್ಷಗಳಿಂದ ರಾಜ್ಯ ಹೆದ್ದಾರಿ ಹೀಗೆ ಹದಗೆಟ್ಟು ಹೋಗಿದ್ದು, ಇನ್ನೂ ಸಹ ರಸ್ತೆ ಮಾಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *