ಚಿತ್ರದುರ್ಗ: ಕಾಡುಗೊಲ್ಲರ ಪೂರ್ವ ಸಂಸ್ಕೃತಿಯನ್ನು ನೆನಪಿಸುವ ಕ್ಯಾತಪ್ಪನ ಜಾತ್ರೆಯನ್ನು ಹದಿನೈದು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿಯ ವಸಲುದಿಬ್ಬದ ಕಾವಲಿನಲ್ಲಿ ಪ್ರತಿ ವರ್ಷದ ಕೊನೆ ಹಾಗೂ ಆರಂಭದಲ್ಲಿ ಆಚರಿಸಲಾಗುತ್ತದೆ.
ಕ್ಯಾತಪ್ಪ ಚನ್ನಮ್ಮನಾಗತಿಹಳ್ಳಿಯಲ್ಲಿ ನೆಲೆಗೊಂಡಿರುವ ಕಾಡುಗೊಲ್ಲರ ದೈವ. ಕಾಡುಗೊಲ್ಲರ ಹದಿಮೂರು ಗುಡಿಕಟ್ಟಿನ ಬತ(ವ್ರತ) ಹಿಡಿದ ಅಣ್ಣ-ತಮ್ಮಗಳು, ಹೆಣ್ಣುಮಕ್ಕಳು, ಸೊಸೆಯಂದಿರು ಸೇರಿ, ಬಣ್ಣದ ಛತ್ರಿಕೆ, ಕೊಂಬು-ಕಹಳೆ, ಉರುಮೆಯ ನಡುವೆ ಹದಿನೈದು ದಿನಗಳವರೆಗೆ ನಿರಂತರವಾಗಿ ಆಚರಿಸುವ ವಿಶಿಷ್ಟ ಬುಡಕಟ್ಟು ಜಾತ್ರೆ ಇದಾಗಿದೆ.
ಕ್ಯಾತಪ್ಪನ ಜಾತ್ರೆಗೆ ‘ವ್ರತ’ ಹಿಡಿದವರ ಮನೆಯಲ್ಲಿ ಹುರುಳಿ-ನವಣೆ ಬಳಸುವಂತಿಲ್ಲ ಹಾಗೂ ಹುರುಳಿ ಮತ್ತು ನವಣೆ ಮನೆಯಲ್ಲಿ ಕಡ್ಡಾಯವಾಗಿ ಇರುವಂತಿಲ್ಲ. ಹಾಗೆಯೇ ಜಾತ್ರೆ ಮುಗಿಯುವವರೆಗೂ ಮಾಂಸಾಹಾರವನ್ನು ಬಳಸುವಂತಿಲ್ಲ. ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪನ ದೇವಸ್ಥಾನದಲ್ಲಿ ಹುರುಳಿ ಬೇಯಿಸಿ ದೇವರಿಗೆ ನೈವೈದ್ಯ ಮಾಡಿ, ಎಲ್ಲರಿಗೂ ಹಂಚಿದ ನಂತರ ವ್ರತ ಬಿಡಿಸುತ್ತಾರೆ.
ಅದೇ ದಿನ ಆಯಾ ಗುಡಿಕಟ್ಟಿನ ಅಣ್ಣ-ತಮ್ಮಂದಿರ ಮನೆಯಲ್ಲಿ ಹುರುಳಿತೊಕ್ಕು ಮತ್ತು ಬೆಲ್ಲದ ಹಾಲನ್ನು ಮಾಡಿ, ನೆಂಟರಿಗೆ ಮೊದಲು ಊಟ ಹಾಕಿದ ನಂತರ ವ್ರತ ಬಿಡಿಸುತ್ತಾರೆ. ಹಬ್ಬದ ಆರಂಭ ಹಿನ್ನೆಯಲ್ಲಿ ಚಳ್ಳಕೆರೆ ನಗರದ ಪಾವಗಡ ರಸ್ತೆ ರೈಲ್ವೆ ಗೇಟ್ ಬಳಿ ಮರವಾಯಿ ಬೆಡಗಿನ ಕಾಡುಗೊಲ್ಲ ಸಮುದಾಯದ ಮುಖಂಡ ಮರವಾಯಿ ವೆಂಕಟೇಶ್, ಅಜ್ಜಪ್ಪ, ಮಹಾಲಿಂಗ, ಶ್ರೀನಿವಾಸ್, ವೀರೇಶ್ ಅವರು ಮನೆ ಮುಂದೆ ಬೆಳೆಸಿದ್ದ ದೇವರ ಪೂಜೆ (ಅತ್ತಿ) ಮರವನ್ನು ಗಂಡುಗೊಡಲಿಯಿAದ ಕಡಿಯುವ ಮೂಲಕ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಜಾತ್ರಾ ಆಚರಣೆಗೆ ಚಾಲನೆ ನೀಡಿದರು.
ಬಳಿಕ ಕರಿ ಕಂಬಳಿ ಗದ್ದಿಗೆ ಹಾಸಿ ವಿಶೇಷ ಪೂಜೆ ಸಲ್ಲಿಸಿದರು. ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ಅತ್ತಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬುಡಕ್ಕೆ ಕೈ ಮುಗಿದರು. ಸಾಮೂಹಿಕ ಅನ್ನ ಸಂತರ್ಪಣೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.
ಕೋಣನ ಮತ್ತು ಬೊಮ್ಮನಗೌಡರ ಗುಂಪಿನವರು ಕಡಿದ ಪೂಜೆ ಮರ ನೆಲಕ್ಕೆ ತಾಕದಂತೆ ಹೆಗಲ ಮೇಲೆ ಹೊತ್ತು ಉರುಮೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಜಾತ್ರೆ ನಡೆಯುವ ಪುರ್ಲೆಹಳ್ಳಿ ಗ್ರಾಮದ ಬಳಿ ವಸಲು ದಿನ್ನೆಗೆ ಸಾಗಿಸಿದರು.
ಬಹು ಮುಖ್ಯವಾಗಿ ಜನವರಿ 5ರಂದು ಜಾತ್ರಾ ಸ್ಥಳದಲ್ಲಿ ಎರೆದ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ, ಜಾಲಿಕಳ್ಳೆ, ಬಾರೆಕಳ್ಳೆ, ಬಂದ್ರೆಸೊಪ್ಪು ಮತ್ತು ಗಳಗಳಿಂದ 20 ಅಡಿ ಎತ್ತರದ ಕಳ್ಳೆ ಗುಡಿ ನಿರ್ಮಿಸಲಾಗುತ್ತದೆ. ವೀರಗಾರರ ಗುಂಪಿನವರು ಬರಿಗಾಲಲ್ಲಿ ಕಳ್ಳೆಮುಳ್ಳಿನ ಗುಡಿ ಹತ್ತಿ ಕೆಲವೇ ಕ್ಷಣದಲ್ಲಿ ಕಳಸ ಕೀಳುವ ರೋಚಕ ಆಚರಣೆ ಜರುಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರೋದು ಇಲ್ಲಿನ ವಿಶೇಷ.


