ಕನ್ನಡದ ಪ್ರತಿಭಾವಂತ ನಿರ್ದೇಶಕ ಆರ್.ಚಂದ್ರು (R. Chandru) ನಿರ್ದೇಶನದ ಕಬ್ಜ (Kabzaa) ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಕಬ್ಜ 2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ ನಟ ಉಪೇಂದ್ರ (Upendra). ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಬ್ಜ 2 ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್ ಅವರನ್ನು ಹೀರೋ ಆಗಿ ಮಾಡಿ ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು.
‘ಕಬ್ಜ ಇದು ನಟರ ಸಿನಿಮಾವಲ್ಲ, ಟೆಕ್ನಿಷಿಯನ್ಸ್ ಸಿನಿಮಾ. ಈ ಸಿನಿಮಾದಲ್ಲಿ ನಿರ್ದೇಶಕರು, ಸಂಗೀತ ನಿರ್ದೇಶಕರ, ಕಲಾ ನಿರ್ದೇಶಕ, ಸಿನಿಮಾಟೋಗ್ರಾಫರ್ ಕಾಣುತ್ತಾರೆ. ನಟರು ಕೇವಲ ಹಿಂದಿನ ಶಕ್ತಿ ಅಷ್ಟೇ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ. ಕಬ್ಜ 2 ಸಿನಿಮಾ ಕೂಡ ಆಗಲಿ. ಆ ಸಿನಿಮಾದಲ್ಲಿ ಸುದೀಪ್ ಮುಖ್ಯ ಪಾತ್ರ ಮಾಡಲಿ’ ಎಂದು ಹಾರೈಸಿದರು ಹಾಗೂ ಕಬ್ಜ 2 ಬರುವ ಕುರಿತು ಸುಳಿವನ್ನೂ ಅವರು ನೀಡಿದರು. ಇದನ್ನೂ ಓದಿ: ಆಸ್ಕರ್ ಪಾರ್ಟಿಯಲ್ಲಿ ಕಂಗೊಳಿಸಿದ ರಾ ರಾ ರಕ್ಕಮ್ಮ
ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್, ‘ಕಬ್ಜ ಸಿನಿಮಾದಲ್ಲಿ ನನಗೆ ಅವಕಾಶ ನೀಡಿಲ್ಲ. ನಿರ್ದೇಶಕರು ಬಹುಶಃ ನನ್ನನ್ನು ಮರೆತಿದ್ದಾರೆ. ಕಬ್ಜ 2 ನಲ್ಲಾದರೂ ಅವಕಾಶ ಕೊಡಲಿ ಎಂದರು. ಅಲ್ಲದೇ ಮೊದಲ ಶೋ ರಾತ್ರಿಯೇ ಇರಲಿ, ಬೆಳಗ್ಗೆ ಆಯೋಜನೆ ಆಗಿರಲಿ ಒಬ್ಬ ಅಭಿಮಾನಿಯಾಗಿ ಬಂದು ಥಿಯೇಟರ್ ನಲ್ಲಿ ಸಂಭ್ರಮಿಸುತ್ತೇನೆ’ ಎಂದರು.
ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್ (Sudeep), ‘ಇಂಥದ್ದೊಂದು ಸಿನಿಮಾದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಸಂತಸ ತಂದಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ್ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆ’ ಎಂದು ಹೇಳಿದರು.
ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ನೆನಪಿರಲಿ ಪ್ರೇಮ್, ನಟಿ ಶ್ರಿಯಾ ಸರಣ್ (Shriya Sharan), ತಾನ್ಯ ಹೋಪ್, ಚಕ್ರವರ್ತಿ ಚಂದ್ರಚೂಡ, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಜಾಕ್ ಮಂಜು, ಸುದೀಪ್ ಪುತ್ರಿ ಶಾನ್ವಿ ಸೇರಿದಂತೆ ಹಲವಾರು ಸಿಲೆಬ್ರಿಟಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿನಿಮಾದ ಹಾಡುಗಳನ್ನು ಮತ್ತು ಟ್ರೈಲರ್ ತೋರಿಸಲಾಯಿತು.




