ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

Public TV
2 Min Read

ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.

ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.

ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.

ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.

Share This Article
Leave a Comment

Leave a Reply

Your email address will not be published. Required fields are marked *