ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ‌ಮಾಡಿದ್ದೇನೆ: ಈಶ್ವರಪ್ಪ

By
2 Min Read

– ನನ್ನ ಹೃದಯದಿಂದ ಮೋದಿ ತೆಗೆದು ಹಾಕಲು ಯಡಿಯೂರಪ್ಪ, ವಿಜಯೇಂದ್ರರಿಂದ ಸಾಧ್ಯವಿಲ್ಲ

ಶಿವಮೊಗ್ಗ: ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಂಡಾಯ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ಕೆ.ಎಸ್‌.ಈಶ್ವರಪ್ಪ (K.S.Eshwarappa) ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಅನೇಕರು ಹೇಳಿದ್ರು, ಬೇಡ ಸರ್ ಬಹಳ‌ ದೊಡ್ಡ ಸಾಹಸಕ್ಕೆ ಕೈ ಹಾಕ್ತಿದ್ದೀರಾ. ನಿಮಗೂ ಭವಿಷ್ಯ ಇರಲ್ಲ, ನಿಮ್ಮ ಮಗನಿಗೂ ಭವಿಷ್ಯ ಇರಲ್ಲ ಅಂದ್ರು. ನಾನು‌ ನನ್ನ ಮಗನ‌ ಜೊತೆ ಈ‌ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ. ನನಗೂ ನನ್ನ ಮಗನಿಗೂ ಭವಿಷ್ಯ ಇಲ್ಲ ಅಂತಾ ಗೊತ್ತಿದ್ದೇ ಈ ನಿರ್ಧಾರ ‌ಕೈಗೊಂಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮಮಂದಿರದಲ್ಲಿ ಅದ್ಧೂರಿ ರಾಮನವಮಿ – ಮದುವಣಗಿತ್ತಿಯಂತೆ ಶೃಂಗಾರಗೊಂಡ ಅಯೋಧ್ಯೆ

ರಾಮನ ಆದರ್ಶ ಇಟ್ಟುಕೊಂಡು ನರೇಂದ್ರ ‌ಮೋದಿ ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಹರಡಲು ಪೂರ್ಣ ಸಹಕಾರ ಕೊಡುತ್ತಿದ್ದಾರೆ. ನರೇಂದ್ರ ಮೋದಿ ಆಡಳಿತವನ್ನು ‌ಪ್ರಪಂಚವೇ ಮೆಚ್ಚುತ್ತಿದೆ. ವಿಶ್ವ ಶಾಂತಿಗೆ ನಾಂದಿ ಆಗುತ್ತದೆ ಎಂದರು.

ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಜೆಡಿಎಸ್ ಹೆಸರು ಪ್ರಸ್ತಾಪ ಮಾಡದೇ ನಮ್ಮ ‌ಮೈತ್ರಿ ಮುಂದಿನ ಚುನಾವಣೆಗೆ ಮುಂದುವರಿಯುತ್ತದೆ ಅಂದಿದ್ದಾರೆ. ನಿಮ್ಮ ಮೈತ್ರಿ ಒಳ ಒಪ್ಪಂದ ಯಾರ ಜೊತೆಗೆ? ಕಳೆದ ಬಾರಿ ಶಿಕಾರಿಪುರದಲ್ಲಿ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಅಂತಾ ಕಾಂಗ್ರೆಸ್‌ನವರು ಹೇಳ್ತಾರೆ. ಒಳ ಒಪ್ಪಂದದಿಂದಾಗಿ ವಿಜಯೇಂದ್ರ‌ ತಿಣುಕಾಡಿ ತಿಣುಕಾಡಿ ಗೆದ್ದರು. ಈ ಬಾರಿ ಲೋಕಸಭೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಶಕ್ತಿಹೀನ ಕಾಂಗ್ರೆಸ್ ಅಭ್ಯರ್ಥಿ ಹಾಕಿಕೊಂಡಿದ್ದಾರೆ. ಒಳ ಒಪ್ಪಂದ ಬಿಜೆಪಿ ಇತಿಹಾಸದಲ್ಲಿ ‌ಇರಲಿಲ್ಲ ಎಂದು ಬಿಎಸ್‌ವೈಗೆ ಟಾಂಗ್‌ ಕೊಟ್ಟರು.

ನಾನು ಅನಂತಕುಮಾರ್, ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿದ್ದೆವು. ನಮ್ಮ ಜೊತೆ ರೈತರು, ಯುವಕರು ಬೆಂಬಲ ಕೊಟ್ಟಿದ್ದರು. ಹಿಂದುತ್ವದ ವಿಚಾರ ಪಕ್ಕಕ್ಕೆ ಸರಿಸಿ ಜಾತಿ ರಾಜಕಾರಣ ನಡೆಯಿತು. ಹೀಗೆ ಆದರೆ ಬಿಜೆಪಿ 68 ಕ್ಕೆ ಬಂದಿದೆ, ಇನ್ನು ಕುಸಿಯುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಈ ರೀತಿ ಹೀನ ಪರಿಸ್ಥಿತಿಗೆ ಬರಲು ನೀವೆ ಕಾರಣ ಅಲ್ವಾ. ನಿಮ್ಮ ಸಿದ್ಧಾಂತ ಸರಿ ಇದೆ. ನಿಮ್ಮ ಜೊತೆ ನಾವಿರುತ್ತೇವೆ ಅಂತಾ ಹಲವರು ಹೇಳ್ತಿದ್ದಾರೆ. ಈಶ್ವರಪ್ಪ ಏನು ಹೇಳಿದರೂ ಆಶೀರ್ವಾದ ಅಂದಿದ್ದಾರೆ ರಾಘವೇಂದ್ರ. ಆದ್ರೆ ವಿಜಯೇಂದ್ರ‌ ಸೊಕ್ಕಿನ ಮಾತನಾಡಿದ್ದಾರೆ. ವಿಜಯೇಂದ್ರ‌ ಇನ್ನು ಎಳಸು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ

ನಾನು ಯಡಿಯೂರಪ್ಪ, ಅನಂತ ಕುಮಾರ್ 40 ವರ್ಷದಿಂದ ಪಕ್ಷ ಕಟ್ಟಿದ್ದೇವೆ. ಅಪ್ಪ-ಮಕ್ಕಳ ಕೈಯಲ್ಲಿ ಪಕ್ಷ ಇಲ್ವಾ? ಜಾತಿ ರಾಜಕಾರಣ ಮಾಡ್ತಿಲ್ವಾ? ನಿಮಗೆ ಬೇಕಾದ ಕಡೆ ಹೊಂದಾಣಿಕೆ ಮಾಡಿಕೊಂಡಿಲ್ವಾ? ಪಕ್ಷದ ಒಳಗೆ ಇದ್ದರೆ ನಾನು ಮಾತನಾಡಲು ಆಗ್ತಿರಲಿಲ್ಲ. ಇದಕ್ಕಾಗಿ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನನ್ನ ಹೃದಯದಲ್ಲಿ ಮೋದಿ ಇದ್ದಾರೆ. ನನ್ನ ಹೃದಯದಿಂದ ಮೋದಿ ತೆಗೆದು ಹಾಕಲು ಕೋರ್ಟ್, ಯಡಿಯೂರಪ್ಪ, ವಿಜಯೇಂದ್ರ‌ ಅವರಿಂದ ಸಾಧ್ಯವಿಲ್ಲ. ನನಗೆ ನರೇಂದ್ರ ಮೋದಿ ದೇವರು ಇದ್ದ ಹಾಗೆ. ಅದಕ್ಕೆ ‌ನಾನು ಅವರ‌ ಪೋಟೊ ಹಾಕಿಕೊಂಡಿದ್ದೇನೆ ಎಂದರು.

Share This Article