– ಹೆಚ್ಎಎಲ್ ಪೊಲೀಸ್, ಎಸ್ಐಟಿಯಿಂದ ಸಲ್ಲಿಕೆಯಾಗಿತ್ತು ಬಿ ರಿಪೋರ್ಟ್
– ತನಿಖೆ ನಡೆಸಿದ್ದ ಎಚ್ಎಎಲ್ ಇನ್ಸ್ಪೆಕ್ಟರ್ ಬಂಧನ
– ಆದಿಕೇಶವುಲು ನಾಯ್ಡು ನಂಬಿಕಸ್ಥನ ಕೇಸ್ನಲ್ಲಿ 7 ದಿನ ವಶಕ್ಕೆ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು (DK Adikesavulu Naidu) ಅವರ ನಂಬಿಕಸ್ಥ ರಘುನಾಥ್ ಸಾವಿನ ಪ್ರಕರಣಕ್ಕೆ (K Raghunath Murder Case) ಸ್ಫೋಟಕ ತಿರುವು ಸಿಕ್ಕಿದ್ದು ಆದಿಕೇಶವುಲು ಅವರ ಮಕ್ಕಳನ್ನೇ ಸಿಬಿಐ (CBI) ಬಂಧಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಆದಿಕೇಶವುಲು ಮಗ ಶ್ರೀನಿವಾಸ್(DK Srinivas) ಮಗಳು ಕಲ್ಪಜ (Kalpaja), ಡಿವೈಎಸ್ಪಿ ಮೋಹನ್ (Mohan) ಅವರನ್ನು 48ನೇ ಎಸಿಜೆಎಂ ನ್ಯಾಯಾಲಯ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ.
ರಘುನಾಥ್ಗೆ ಸೇರಿದ ಆಸ್ತಿ ಸಂಬಂಧ ನಕಲಿ ಛಾಪಾಕಾಗದ ಮತ್ತು ನಕಲಿ ವಿಲ್ ಸೃಷ್ಟಿ ಮಾಡಿದ ಆರೋಪದಲ್ಲಿ ಸಿಬಿಐ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆರೋಪಿತೆ ಕಲ್ಪಜ ಜಡ್ಜ್ ಮುಂದೆ ಕಣ್ಣೀರು ಹಾಕಿದರು.

ಏನಿದು ಪ್ರಕರಣ?
ಹೆಚ್ಎಎಲ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಬಳಿ ಮೇ 14, 2019 ರಲ್ಲಿಆದಿಕೇಶವುಲು ಗೆಸ್ಟ್ ಹೌಸ್ನಲ್ಲಿ ರಘುನಾಥ್ ಮೃತಪಟ್ಟಿದ್ದರು. ರಘುನಾಥ್ ಬಳಿಯಿಂದ ಆಸ್ತಿಯನ್ನು ಶ್ರೀನಿವಾಸ್ ಮತ್ತು ಕಲ್ಪಜ ಬರೆಸಿಕೊಂಡ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ | ಮನೆಗೆ ನುಗ್ಗಿ 7 ತಿಂಗಳ ಗರ್ಭಿಣಿಯನ್ನೇ ಕೊಂದ ತಂದೆ
ರಘುನಾಥ್ ಪತ್ನಿ ಬಿ ರಿಪೋರ್ಟ್ ಪಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಎಸ್ಐಟಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಬಿ ರಿಪೋರ್ಟ್ ಪ್ರಶ್ನಿಸಿ ಮಂಜುಳ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅದೀಕೇಶವಲು ಕುಟುಂಬವರು ಸುಪ್ರೀಂಗೆ (Supreme Court) ಮೇಲ್ಮನವಿ ಸಲ್ಲಿಸಿದ್ದರು. ಅಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಸಿಬಿಐಗೆ ನೀಡಿರುವುದು ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಪ್ರಕರಣದ ತನಿಖೆ ನಡೆಸುವಂತೆ ಆದೇಶಿಸಿತ್ತು.
ತನಿಖೆ ಆರಂಭಿಸಿದ ಚೆನ್ನೈ ಸಿಬಿಐ ಕೊಲೆ ಕೇಸ್ ದಾಖಲಿಸಿ ಈಗ ಶ್ರೀನಿವಾಸ್, ಕಲ್ಪಜರನ್ನು ಬಂಧಿಸಿದೆ. ತನಿಖೆ ನಡೆಸಿದ್ದ ಅಂದಿನ ಹೆಚ್ಎಎಲ್ ಇನ್ಸ್ಪೆಕ್ಟರ್ ಮೋಹನ್ ಅವರನ್ನು ಸಿಬಿಐ ಬಂಧಿಸಿ ವಿಚಾರಣೆ ನಡೆಸುತ್ತಿದೆ.

