ತುಮಕೂರು: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಅವರನ್ನು ವಜಾ ಮಾಡಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗಿರಿ ಪಟ್ಟಣ ಬಂದ್ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜಣ್ಣ ಬೆಂಬಲಿಗರು ಮತ್ತು ಅಭಿಮಾನಿಗಳು ಮಧುಗಿರಿ ಪಟ್ಟಣದಲ್ಲಿ ಜಮಾವಣೆಗೊಂಡರು. ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಮುಂದಾದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ರಾಜಣ್ಣರ ರಾಜೀನಾಮೆ ವಾಪಸ್ ಪಡೆಯುವಂತೆ ಬೆಂಬಲಿಗರು ಒತ್ತಾಯಿಸಿದರು. ಬಳಿಕ ಪಾದಯಾತ್ರೆ ಮೂಲಕ ಎಸಿ ಕಚೇರಿ ವರೆಗೆ ಅಭಿಮಾನಿಗಳು ಸಾಗಿದರು.
ಬೇಕೆ ಬೇಕು ನ್ಯಾಯ ಬೇಕು ಎಂದು ಎಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಅವರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಎಸಿ ಕಚೇರಿಯಿಂದ ತುಮಕೂರು ಗೇಟ್ ವರೆಗೂ ರಾಜಣ್ಣ ಬೆಂಬಲಿಗರ ಪಾದಯಾತ್ರೆ ನಡೆಯಿತು.
ತುಮಕೂರು ಗೇಟ್‌ನ ರಸ್ತೆಯಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತರು. ಇದೇ ವೇಳೆ, ಬೇಕರಿಯೊಂದಕ್ಕೆ ನುಗ್ಗಲು ಪ್ರಯತ್ನಿಸಿದರು. ಎಂಜಿ ಕ್ರೀಡಾಂಗಣದ ಬಳಿ ಬೆಂಬಲಿಗರು ಹೈಡ್ರಾಮಾ ನಡೆಸಿದರು. ಅಭಿಮಾನಿಯೊಬ್ಬ ವಿಷ ಕುಡಿಯಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು. ಆತನನ್ನು ತಕ್ಷಣವೇ ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.
ತಮ್ಮ ಸಡಿಲ ಹೇಳಿಕೆಗಳ ಮೂಲಕವೇ ಪಕ್ಷದೊಳಗಡೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸೋವಾರ ಸಂಪುಟದಿಂದ ವಜಾಗೊಳಿಸಿದರು. ಈ ಸಂಬಂಧ ರಾಜಣ್ಣ ಬೇಸರಗೊಂಡಿದ್ದಾರೆ. ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.