ಸ್ವಗ್ರಾಮದ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ಘೋಷಿಸಿದ ಕೆಸಿಆರ್

Public TV
1 Min Read

ಹೈದರಾಬಾದ್: ತಮ್ಮ ಸ್ವಗ್ರಾಮ ಚಿಂತಾಮಡಕ ಗ್ರಾಮದಲ್ಲಿ ನೆಲೆಸಿರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂಪಾಯಿ ಹಣ ನೀಡುವುದಾಗಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರು ಘೋಷಿಸಿದ್ದಾರೆ.

ಚಿಂತಾಮಡಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿಂತಾಮಡಕ ಗ್ರಾಮದಲ್ಲಿ ಇರುವ ಪ್ರತಿ ಕುಟುಂಬಕ್ಕೂ 10 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಹಣದಿಂದ ಕೃಷಿಗೆ ಬೇಕಾದ ಅಗತ್ಯ ಉಪಕರಣಗಳನ್ನು ಖರೀದಿಸಿ. ಉತ್ತಮ ಸೌಕರ್ಯವಿರುವ ಮನೆಗಳನ್ನು ಕಟ್ಟಿಸಿಕೊಳ್ಳಿ. ಆಧುನಿಕ ಸೋಲಾರ್ ಶಕ್ತಿಯ ಉಪಕರಣ ಬಳಸಿ, ಈ ಹಣವನ್ನು ಸದುಪಯೋಗ ಮಾಡಿಕೊಳ್ಳಿ ಎಂದಿದ್ದಾರೆ.

ಅಷ್ಟೇ ಅಲ್ಲದೆ ಗ್ರಾಮದಲ್ಲಿ ರಸ್ತೆ, ದೇಗುಲ ಹಾಗೂ ಇತರೇ ಸೌಕರ್ಯವನ್ನು ಕಲ್ಪಿಸುವ ಉದ್ದೇಶದಿಂದ ಅಭಿವೃದ್ಧಿಗಾಗಿ ಅನುದಾನವನ್ನು ಕೂಡ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿದೆ.

ಇದು ನನ್ನ ಕರ್ತವ್ಯ. ನಿಮಗೆ ಅನುಕೂಲವಾಗಬೇಕು, ಪ್ರತಿಯೊಬ್ಬ ವ್ಯಕ್ತಿ ಕೂಡ ಆರೋಗ್ಯವಾಗಿರಬೇಕು, ಸಿರಿವಂತನಾಗಬೇಕು ಎಂದು ಚಿಂತಾಮಡಕವನ್ನು ಒಂದು ಮಾದರಿ ಗ್ರಾಮವನ್ನಾಗಿಸಬೇಕೆಂಬ ಆಸೆಯನ್ನು ಕೆಸಿಆರ್ ವ್ಯಕ್ತಪಡಿಸಿದರು. ಅಲ್ಲದೆ ಚಿಂತಾಮಡಕದ ಜನರ ಆಶೀರ್ವಾದವೇ ಈ ಯಶಸ್ಸಿಗೆ ಕಾರಣ. ರಾಜಕೀಯಕ್ಕೆ ಬರಲು ತೆಲಂಗಾಣ ಚಳುವಳಿ ನಡೆಯಲು ಸಿದ್ಧಿಪೇಟೆ ಪ್ರೇರಣೆ ಎಂದು ಜನರನ್ನು ಕೆಸಿಆರ್ ಅಭಿನಂದಿಸಿದರು.

ಸಿದ್ಧಿಪೇಟೆ ಅಭಿವೃದ್ಧಿಗೆ 25 ಕೋಟಿ, ರಂಗನಾಯಕ ಸಾಗರ ಕೆರೆ ಅಭಿವೃದ್ಧಿಗೆ 5 ಕೋಟಿ ಮತ್ತು ಸಿದ್ಧಿಪೇಟೆ ವಿಧಾನಸಭೆ ವ್ಯಾಪ್ತಿಗೆ ಬರುವ ಪ್ರತಿ ಪಂಚಾಯ್ತಿಗೂ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜೊತೆ ಮುಸ್ತಾಬಾದ್ ಮತ್ತು ಗುಡೂರ್ ಗ್ರಾಮಕ್ಕೆ ತಲಾ 1 ಕೋಟಿ ಹಾಗೂ ಡಬ್ಬಾಕ್ ಗ್ರಾಮಕ್ಕೆ 10 ಕೋಟಿ ರೂ. ಅನುದಾನ ನೀಡುವುದಾಗಿ ಜನರಿಗೆ ಮಾತು ಕೊಟ್ಟಿದ್ದಾರೆ.

ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನೂ ಕೂಡ ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕೆಸಿಆರ್ ಸೂಚಿಸಿದ್ದು, ಮತ್ತೆ ನವೆಂಬರ್ ನಲ್ಲಿ ಗ್ರಾಮಗಳಿಗೆ ಭೇಟಿ ನೀಡುವುದಾಗಿ ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *