ಭಾರತಕ್ಕೆ ನಾವು ಯಾವುದೇ ಪುರಾವೆ ನೀಡಿಲ್ಲ: ಟ್ರುಡೋ ಸೆಲ್ಫ್‌ ಗೋಲ್‌

Public TV
2 Min Read

ಒಟ್ಟಾವಾ: ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಗೆ ಸಂಬಂಧಿಸಿದಂತೆ ಭಾರತಕ್ಕೆ (India) ನಾವು ಯಾವುದೇ ಪುರಾವೆ ನೀಡಿಲ್ಲ ಎಂದು ಕೆನಡಾ (Canada) ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ನಂಬಲರ್ಹವಾದ ಗುಪ್ತಚರ ಸೇವೆಗಳಿಂದ ತಿಳಿಸಲಾಯಿತು. ನಾವು ಇದನ್ನು ಪರಿಶೀಲಿಸಲು ಗುಪ್ತಚರ ಸಂಸ್ಥೆಗಳನ್ನು ಕೇಳಿದ್ದೆವು ಎಂದು ತಿಳಿಸಿದರು.

ಜುಲೈ ಮತ್ತು ಆಗಸ್ಟ್‌ನಲ್ಲಿ ನಮ್ಮ ನೆಲದಲ್ಲಿ ಕೆನಡಾದವರ ಹತ್ಯೆಯ ಹಿಂದೆ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ನನಗೆ ತಿಳಿಸಲಾಯಿತು. ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಂತರರಾಷ್ಟ್ರೀಯ ಕಾನೂನಿನ ನಿಯಮದ ಉಲ್ಲಂಘನೆಯಾಗಿದ್ದು ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ಅದನ್ನು ಮಾಡಿದ್ದರೆ ಅದು ದೊಡ್ಡ ತಪ್ಪು ಎಂದು ಹೇಳಿದರು. ಇದನ್ನೂ ಓದಿ: ನಿಜ್ಜರ್‌ ಹತ್ಯೆ ಕೇಸ್‌ ಸಂಘರ್ಷ – ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಸಮರ; ಏನಿದು ಬಿಕ್ಕಟ್ಟು?

 

ಈ ವಿಚಾರದ ಬಗ್ಗೆ ಭಾರತ ಸಾಕ್ಷ್ಯಗಳನ್ನು ಕೇಳಿತ್ತು. ಆದರೆ ಭಾರತವು ತನಿಖೆಗೆ ಸಹಕರಿಸಲು ನಿರಾಕರಿಸಿತು ಮತ್ತು ನಮ್ಮ ಸರ್ಕಾರದ ವಿರುದ್ಧದ ದಾಳಿಯನ್ನು ದ್ವಿಗುಣಗೊಳಿಸಿತು ಎಂದು ದೂರಿದರು.

ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಭಾರತ ಸಾಕಷ್ಟು ಬಾರಿ ಸಾಕ್ಷ್ಯಗಳನ್ನು ಕೇಳಿತ್ತು. ಆದರೆ ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಸರಿಯಾದ ಸಾಕ್ಷ್ಯ ನೀಡದೇ ಭಾರತಕ್ಕೆ ಸಾಕ್ಷ್ಯ ನೀಡಿದೆ ಎಂದು ಮೊಂಡುವಾದ ಮಾಡುತ್ತಿತ್ತು. ಕಳೆದ ವಾರ ಖಲಿಸ್ತಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ರಾಯಭಾರಿ ಹಾಗೂ ಇತರ ರಾಜತಾಂತ್ರಿಕ ಅಧಿಕಾರಿಗಳ ಕೈವಾಡ ಇದೆ ಎಂಬ ಕೆನಡಾದ ಹೊಸ ಆರೋಪಕ್ಕೆ ಭಾರತ ಕೆಂಡಾಮಂಡಲವಾಗಿದೆ.

ಕೆನಡಾದಲ್ಲಿರುವ ತನ್ನ ರಾಯಭಾರಿಯನ್ನು ತತ್‌ಕ್ಷಣ ಹಿಂದಕ್ಕೆ ಕರೆಯಿಸಿಕೊಳ್ಳಲು ತೀರ್ಮಾನಿಸಿದ ಭಾರತ ದೆಹಲಿಯಲ್ಲಿರುವ ಕೆನಡಾದ ಆರು ಮಂದಿ ರಾಜತಾಂತ್ರಿಕರಿಗೆ ಅ. 19ರ ಮಧ್ಯರಾತ್ರಿಯೊಳಗೆ ದೇಶ ತೊರೆಯುವಂತೆ ಆದೇಶಿಸಿದೆ.

 

Share This Article