ಜಸ್ಟಿನ್ ಲ್ಯಾಂಗರ್ ಆಸ್ಟ್ರೇಲಿಯಾದ ನೂತನ ಕೋಚ್

Public TV
2 Min Read

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಟೆಸ್ಟ್ ಓಪನರ್ ಜಸ್ಟಿನ್ ಲ್ಯಾಂಗರ್ ನೇಮಕಗೊಂಡಿದ್ದಾರೆ.

ಸದ್ಯ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ಪರ್ತ್ ಸ್ಕಾಚರ್ಸ್ ತಂಡದ ಕೋಚ್ ಕಾರ್ಯನಿರ್ವಹಿಸುತ್ತಿರುವ 47 ವರ್ಷದ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಮುಂದಿನ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಮೇ 22ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದ ಚೆಂಡು ವಿರೂಪಗೊಳಿಸಿದ್ದ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಕೋಚ್ ಡ್ಯಾರೆನ್ ಲೆಹ್ಮನ್ ಜಾಗಕ್ಕೆ ಜಸ್ಟಿನ್ ಲ್ಯಾಂಗರ್‍ರನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆಯ್ಕೆಮಾಡಿದೆ. ಲ್ಯಾಂಗರ್ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿದಂತೆ ಮೂರು ಮಾದರಿಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಈ ಹಿಂದೆ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಕೋಚ್ ಆಯ್ಕೆಯ ಕುರಿತು ಪ್ರತಿಕ್ರಿಯಿಸಿರುವ ಲ್ಯಾಂಗರ್, ರಾಷ್ಟ್ರೀಯ ತಂಡವನ್ನು ಮುನ್ನಡೆಸುವ ಅವಕಾಶ ದೊರೆತಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ. 1993ರಿಂದ 2007 ರವರೆಗೂ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರನಾಗಿದ್ದ ಲ್ಯಾಂಗರ್ 105 ಟೆಸ್ಟ್ ಪಂದ್ಯಗಳನ್ನಾಡಿದ್ದು, 23 ಶತಕಗಳು ಸೇರಿದಂತೆ 45.27 ಸರಾಸರಿಯಲ್ಲಿ 7,696 ರನ್‍ಗಳಿಸಿದ್ದಾರೆ. ಲ್ಯಾಂಗರ್ ಅವರ ಈ ನಾಲ್ಕು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯಾ ಪ್ರಮುಖವಾಗಿ ಎರಡು ಆಶಸ್ ಸರಣಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್, ಜಸ್ಟಿನ್ ಲ್ಯಾಂಗರ್ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ನಾವು ಬಲವಾಗಿ ನಂಬುತ್ತೇವೆ. ಅವರು ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

2013ರಲ್ಲಿ ಕೋಚ್ ಆಗಿ ನೇಮಗೊಂಡು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಲೆಹ್ಮನ್ 2019ರ ಆಶಸ್ ಸರಣಿಯವರೆಗೂ ಕೋಚ್ ಆಗಿ ಮುಂದುವರೆಯಬೇಕಿತ್ತು. ಆದರೆ ಮಾರ್ಚ್‍ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್‍ನಲ್ಲಿ ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್ ಕಣ್ಣೀರ ವಿದಾಯ ಹೇಳಿದ್ದರು. ಇದೇ ವೇಳೆ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಉಪನಾಯಕರಾಗಿದ್ದ ಡೇವಿಡ್ ವಾರ್ನರ್ ಒಂದು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಈ ಕಾರಣದಿಂದಾಗಿ ಪ್ರಸಕ್ತ ಐಪಿಲ್‍ನಿಂದಲೂ ಹೊರಗುಳಿದಿದ್ದಾರೆ. ಮತ್ತೊಬ್ಬ ಬ್ಯಾಟ್ಸ್‍ಮನ್ ಕ್ಯಾಮರೂನ್ ಬ್ಯಾನ್ ಕ್ರಿಫ್ಟ್ ರನ್ನು 9 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *