– 1 ದಿನ ಹಿಂದೆ ಗೊತ್ತಾದರೂ ಪೊಲೀಸ್ ತನಿಖೆ ವಿಳಂಬವೇಕೆ?
– ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಟ್ವಿಸ್ಟ್
– ಆತ್ಮಹತ್ಯೆ ಎಂದ ಪೊಲೀಸರಿಂದ ಕೊನೆಗೂ ಓರ್ವನ ಬಂಧನ
– ವಿಜಯ್ ಜಾಗಟಗಲ್
ರಾಯಚೂರು: ನಗರದ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣ ಈಗ ಟ್ವಿಸ್ಟ್ ಪಡೆದಿದೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಈಗ ಅತ್ಯಾಚಾರವೆಸಗಿ, ಕೊಲೆ ಎಂದು ದಾಖಲಾಗಿದೆ. ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಹೋರಾಟದ ಬಳಿಕ ಪೊಲೀಸರು ಅಲರ್ಟ್, ನಿಮ್ಮ ನಿರ್ಲಕ್ಷ್ಯಕ್ಕೆ ಕಾರಣವೇನು?:
ಏಪ್ರಿಲ್ 16 ರಂದು ಪ್ರಕರಣ ಹೊರ ಜಗತ್ತಿಗೆ ತಿಳಿಯಿತು. ಆದರೆ ಅದರ ಹಿಂದಿನ ದಿನವೇ (ಏಪ್ರಿಲ್ 15) ಬೆಟ್ಟದಲ್ಲಿ ಯುವತಿಯ ಶವ ನೇತಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನ ಒಂದು ದಿನ ಬಿಟ್ಟು ಪೊಲೀಸರು ಕೆಳಗಿಳಿಸಿದ್ದಾರೆ. ಫೋರೆನ್ಸಿಕ್ ತಜ್ಞರ ತಂಡ ಬರುವವರೆಗೂ ಪೊಲೀಸರು ಶವವನ್ನು ಹಾಗೇ ಬಿಟ್ಟಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವದ ಬಳಿ ಸಿಕ್ಕ ಡೆತ್ ನೋಟ್ ನಿಂದಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳುತ್ತಿದ್ದಾರೆ. ಪದೇ ಪದೇ ಪರೀಕ್ಷೆಯಲ್ಲಿ ಫೇಲ್ ಆಗುತ್ತಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು. ಆದರೆ ಮಧು ಪತ್ತಾರ್ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ ಹಾಗೂ ಫೇಲ್ ಆಗಿರಲಿಲ್ಲ. ಆದರೆ ಪೊಲೀಸರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಿದ್ದರು. ಈ ಎಲ್ಲ ವಿಚಾರಗಳನ್ನೂ ಪೊಲೀಸರು ಗೌಪ್ಯವಾಗಿಯೇ ಇಡಲು ಪ್ರಯತ್ನಿಸುತ್ತಿದ್ದರಂತೆ. ಆದರೆ ಮಧು ಮೃತದೇಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಮೇಲೆ ಕೊಲೆ ಸಂಶಯ ಹೆಚ್ಚಾಗಿ ವಿದ್ಯಾರ್ಥಿಗಳು ನಿರಂತರ ಹೋರಾಟಕ್ಕೆ ಮುಂದಾದರು. ಕೊನೆಗೆ ಪೋಷಕರ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್ ಯಾದವ್ ನನ್ನು ಬಂಧಿಸಿದ್ದಾರೆ.
ಏಪ್ರಿಲ್ 16 ಕ್ಕೂ ಮುಂಚೆ ನಡೆದದ್ದೇನು….?
ನಗರದ ನವೋದಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದನೇ ಸೆಮಿಸ್ಟರ್ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದ ನಗರದ ಐಡಿಎಸ್ ಎಂಟಿ ಬಡಾವಣೆ ನಿವಾಸಿ ಮಧು ಪತ್ತಾರ್ ಏಪ್ರಿಲ್ 13 ರಂದು ಕಾಣೆಯಾಗಿದ್ದಾಳೆ. ಪೋಷಕರು ಗೊತ್ತಿರುವ ಎಲ್ಲಾ ಕಡೆ ಹುಡುಕಾಡಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದ್ರೆ ಮಧು ಸುಳಿವು ಮಾತ್ರ ಸಿಕ್ಕಿರಲಿಲ್ಲ. ಮಧು ಸಹೋದರಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವಂತೆ ಏಪ್ರಿಲ್ 17ಕ್ಕೆ ಮಧು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು, ಆದ್ರೆ ಏಪ್ರಿಲ್ 16 ಕ್ಕೆ ಮಧು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆರೋಪಿ ಸುದರ್ಶನ್ ಮಧು ಜೊತೆ ತುಂಬಾ ದಿನಗಳಿಂದ ಸ್ನೇಹದಲ್ಲಿದ್ದ ಹಾಗೂ ಇವನ ಮೇಲೆಯೇ ಮಧು ಪೋಷಕರಿಗೆ ಸಂಶಯವಿತ್ತು. ಈ ಅನುಮಾನದ ಮೇಲೆಯೇ ಪೊಲೀಸರು ಅವನನ್ನು ಶವ ಪತ್ತೆಯಾದ ದಿನವೇ ವಶಕ್ಕೆ ಪಡೆದಿದ್ದರು. ಆದ್ರೆ ಬಹಿರಂಗಗೊಳಿಸಿರಲಿಲ್ಲ. ಪೊಲೀಸರ ಈ ವರ್ತನೆ ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಮೌನ ಹೋರಾಟ!
ಮಧು ಸಾವಿನ ಬಗ್ಗೆ ಅನುಮಾನಗಳು ಶುರುವಾಗುತ್ತಿದ್ದಂತೆ ಇಂಜಿನಿಯರಿಂಗ್ ಕಾಲೇಜು ಮಾತ್ರವಲ್ಲದೆ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟಕ್ಕಿಳಿದಿದ್ದಾರೆ. ನಗರದ ತೀನ್ ಕಂದೀಲ್ ವೃತ್ತದಲ್ಲಿ ನೂರಾರು ಜನ ವಿದ್ಯಾರ್ಥಿಗಳು ಸೇರಿ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಮಧು ಸಾವಿಗೆ ನ್ಯಾಯ ಕೇಳಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಮಾಡಿದ್ದಾರೆ. ಇದೆಲ್ಲಕ್ಕಿಂತಲೂ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಕಾಂತ್ರಿಯನ್ನೇ ಹುಟ್ಟುಹಾಕಲು ಮುಂದಾಗಿದ್ದಾರೆ. ಮಧು ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಸ್ಟಿಸ್ ಫಾರ್ ಮಧು ಎಂಬ ಹೆಸರಿನಲ್ಲಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ.
ಮಧು ತಾಯಿ ರೇಣುಕಾದೇವಿ ನೀಡಿರುವ ದೂರಿನ ಮೇರೆಗೆ ಅತ್ಯಾಚಾರ, ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುದರ್ಶನ್‍ನನ್ನು ಬಂಧಿಸಲಾಗಿದೆ. ಇನ್ನೂ ಎರಡು ಮೂರು ದಿನದಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬರಲಿದ್ದು ಸತ್ಯಾಂಶ ಹೊರಬರಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೋರಾಟವನ್ನು ಇನ್ನೂ ಜೀವಂತವಿಟ್ಟಿರುವ ವಿದ್ಯಾರ್ಥಿಗಳು ಮಧುಸಾವಿಗೆ ನ್ಯಾಯ ಸಿಗುವವರೆಗೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಆಕೆಯ ಸಾವಿಗೆ ನ್ಯಾಯ ಸಿಗದಿದ್ದರೆ ರಾಯಚೂರು ಬಂದ್ ಮಾಡಿ ಹೋರಾಟ ನಡೆಸಲು ಮಂದಾಗುವುದಾಗಿ ತಿಳಿಸಿದ್ದಾರೆ.