ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿಯವರು ಜನರನ್ನು ದಿಕ್ಕು ತಪ್ಪಿಸಲು ಸಿಎಂ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಭೇಟಿಮಾಡಿದ್ದೇನೆ ಎಂದು ಸಿಎಂಗೆ ಕನಸು ಬಿದ್ದಿದ್ದೀಯಾ. ಕನಸಿನಲ್ಲಿ ಈ ಭೇಟಿ ನಡೆದಿರಬಹುದು. ಭೇಟಿ ಮಾಡಿದ್ದಕ್ಕೆ ಸಾಕ್ಷಿ ಇದ್ದರೆ ತೋರಿಸಲಿ. ಭೇಟಿ ಮಾಡಿ ನನಗೆ ಏನೂ ಆಗ ಬೇಕಿಲ್ಲ ಎಂದು ಖಾರವಾಗಿಯೇ ಹೇಳಿದ್ರು.
ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಟೋಟಲಿ ಬೋಗಸ್ ಪ್ರಣಾಳಿಕೆ. ಇಷ್ಟು ದಿನ ಎಲ್ಲದರಲ್ಲೂ ಲೂಟಿ ಮಾಡಿ ಸಾಕಾಗಿದೆ. ಈಗ ಮತ್ತೆ ಹೊಸ ಲೂಟಿಗೆ ಪ್ಲಾನ್ ಮಾಡಿದ್ದಾರೆ. ಅದಕ್ಕೆ ಬೇಕಾದ ಭಾಗ್ಯಗಳನ್ನ ಸೃಷ್ಟಿ ಮಾಡಿದ್ದಾರೆ. ಲೂಟಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಕೊಡುತ್ತಾರೆ ಎಂದು ಆರೋಪ ಮಾಡಿದರು.
5 ವರ್ಷದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಹಂತ ಹಂತವಾಗಿ ಸಾಯಿಸಿದ್ದಾರೆ. ಈಗ ಬಲಪಡಿಸುತ್ತೇವೆ ಎಂದು ಹೇಳುತ್ತಾರೆ. 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಖಾಲಿ ಇಟ್ಟಿದ್ದಾರೆ. ಇನ್ನು ಮುಂದಿನ 5 ವರ್ಷಗಳಲ್ಲಿ 1ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ ಎನ್ನುವ ರಾಹುಲ್‍ಗಾಂಧಿ, ಮೊದಲು ತಮ್ಮವರ ಲೂಟಿ ಬಗ್ಗೆ ಅರ್ಥ ಮಾಡಿಕೊಳ್ಳಲಿ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ವಿಚಾರದಲ್ಲಿ ಸಮಾನರು. ನನ್ನ ಹೋರಾಟ ಇರುವುದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಎಂದು ತಿಳಿಸಿದರು.