ನಿರೀಕ್ಷೆಗೂ ಮೀರಿ ವೃದ್ಧಿ – ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

Public TV
1 Min Read

ನವದೆಹಲಿ: ಜುಲೈ- ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ(Indian Economy) ನಿರೀಕ್ಷೆಗೂ ಮೀರಿ ವೃದ್ಧಿಯಾಗಿದೆ.

ಈ ಅವಧಿಯಲ್ಲಿ ಹಲವು ಸಂಸ್ಥೆಗಳು ಜಿಡಿಪಿ (GDP) 6.8% ರಷ್ಟು ಪ್ರಗತಿ ಸಾಧಿಸಬಹುದು ಎಂದು ಅಂದಾಜು ಮಾಡಿತ್ತು. ಆರ್‌ಬಿಐ (RBI) 6.5% ಅಭಿವೃದ್ಧಿ ಸಾಧಿಸಬಹುದು ಎಂದು ನಿರೀಕ್ಷೆ ಮಾಡಿತ್ತು.ಆದರೆ ಈ ನಿರೀಕ್ಷೆಗೂ ಮೀರಿ ಜಿಡಿಪಿ 7.6% ರಷ್ಟು ಪ್ರಗತಿ ಸಾಧಿಸಿದೆ.

ಎರಡನೇ ತ್ರೈಮಾಸಿಕದಲ್ಲಿ ಈ ಸಾಧನೆ ಮಾಡುವ ಮೂಲಕ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಲ್ಲಿ (World Fastest Economic Growth) ಮೊದಲ ಸ್ಥಾನದಲ್ಲೇ ಭಾರತ ಮುಂದುವರಿದಿದೆ.

ಉತ್ಪದನಾ ವಲಯ (13.9%), ನಿರ್ಮಾಣ(13.3%), ಗಣಿಗಾರಿಕೆ(10.0%) ಕ್ಷೇತ್ರದ ಬೆಳವಣಿಗೆಯಿಂದ ಜಿಡಿಪಿ ದರ ವೃದ್ಧಿಯಾಗಿದೆ. ಮೊದಲ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಕೃಷಿ (1.2%), ಹೋಟೆಲ್‌, ಸಾರಿಗೆ, ಸಂವಹನ (4.3%), ಫೈನಾನ್ಸ್‌, ರಿಯಲ್‌ ಎಸ್ಟೇಟ್‌(6.0%) ಬೆಳವಣಿಗೆ ಕಡಿಮೆಯಾಗಿದೆ.

2022-23ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 6.2% ಜಿಡಿಪಿ ಬೆಳವಣಿಗೆ ಸಾಧಿಸಿದ್ದರೆ ಈ ಹಣಕಾಸು ವರ್ಷದ ಏಪ್ರಿಲ್‌-ಜೂನ್‌ ಅವಧಿಯ ಮೊದಲ ತ್ರೈಮಾಸಿಕದಲ್ಲಿ 7.8% ರಷ್ಟು ಬೆಳವಣಿಗೆ ಸಾಧಿಸಿತ್ತು. ಇದನ್ನೂ ಓದಿ: ಜಪಾನ್‌ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುತ್ತಾ ಭಾರತ?

ಯಾವ ದೇಶದ್ದು ಎಷ್ಟು?
ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತ 7.6%, ಫಿಲಿಪೈನ್ಸ್ 5.9%, ರಷ್ಯಾ 5.5%, ಅಮೆರಿಕ 5.2%, ಚೀನಾ 4.9%, ಯುಕೆ 0.6%, ಜರ್ಮನಿ -0.4%, ಜಪಾನ್‌ -2.1% ಜಿಡಿಪಿ ಪ್ರಗತಿ ಸಾಧಿಸಿದೆ.

ಜಿಡಿಪಿ ಎಂದರೇನು?
ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪದನೆಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ. ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಗಣಿಗಾರಿಕೆ, ರಿಯಲ್‌ ಎಸ್ಟೇಟ್‌, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಎಂದು ಲೆಕ್ಕ ಹಾಕಲಾಗುತ್ತದೆ.

Share This Article