ಪಾಳೇಗಾರರ ಅವಧಿಯಲ್ಲಿ ನಿರ್ಮಿಸಿದ್ದ ಐತಿಹಾಸಿಕ ಕಲ್ಯಾಣಿ ಪುನಶ್ಚೇತನ

Public TV
1 Min Read

ಬೆಂಗಳೂರು: ಪಾಳೇಗಾರರ ಆಡಳಿತ ಅವಧಿಯಲ್ಲಿ ನಿರ್ಮಿಸಿದ್ದ ಇತಿಹಾಸ ಪ್ರಸಿದ್ಧ ಕಲ್ಯಾಣಿಯೊಂದು ಗಿಡಗಂಟೆಗಳು ಬೆಳೆದುಕೊಂಡು ಸಂಪೂರ್ಣ ಕಲ್ಯಾಣಿಯು ಕಾಣದಂತೆ ಅವನತಿಯ ಅಂಚಿಗೆ ತಲುಪಿತ್ತು. ಇದೀಗ ಆ ಕಲ್ಯಾಣಿಗೆ ನ್ಯಾಯಾಧೀಶರ ತಂಡ, ವಕೀಲರ ತಂಡ, ಪೊಲೀಸ್ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯ ಮಾಡಿ ಪುನಶ್ಚೇತನ ಮಾಡುವ ಮೂಲಕ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸುರಗಜಕ್ಕನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಸಿಡಿಹೊಸಕೋಟೆ ಬಳಿಯಿರುವ ಪುರಾತನ ಕಾಲದ ದೊರೆಸಾನಿ ಕಲ್ಯಾಣಿಯೂ ಅವನತಿಯ ಅಂಚಿಗೆ ತಲುಪಿ ಕಲ್ಯಾಣಿ ಇನ್ನು ಮುಂದಿನ ಪೀಳಿಗೆಗೆ ಕೇವಲ ನೆನಪು ಮಾತ್ರ ಎಂದುಕೊಂಡಿದ್ದರು. ಈ ಬಗ್ಗೆ ಸರ್ಕಾರವಾಗಲಿ, ಪುರಾತತ್ವ ಇಲಾಖೆಯಾಗಲಿ, ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಾಗಲಿ ಗಮನ ಹರಿಸದೆ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗುವಲ್ಲಿ ವಿಫಲವಾಗಿದ್ದರು. ಕಲ್ಯಾಣಿಯೂ ಸಂಪೂರ್ಣ ಗಿಡಗಂಟೆಗಳಿಂದ ತುಂಬಿಕೊಂಡು ವಿಷ ಜಂತುಗಳ ಆವಾಸಸ್ಥಾನವಾಗಿತ್ತು. ಅಲ್ಲಿ ಕಲ್ಯಾಣಿ ಇತ್ತ ಎನ್ನುವಂತಹ ಪ್ರಶ್ನೆ ಮೂಡುವಂತೆ ಮಾಡಿತ್ತು.

ಕಲ್ಯಾಣಿಯ ಅವನತಿಯ ಅಂಚಿನಲ್ಲಿರುವ ಬಗ್ಗೆ ಸಮಾಜಿಕ ಜಾಲತಾಣ ಸೇರಿದಂತೆ ಇತಿಹಾಸ ತಜ್ಞರು ಸಹ ಈ ಬಗ್ಗೆ ಗಮನ ಹರಿಸಬೇಕೆಂದು ಮಾಹಿತಿ ಹಂಚಿಕೊಂಡಿದ್ದರು. ಈ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸಿದ ನ್ಯಾಯಾಧೀಶರ ತಂಡ, ವಕೀಲರ ತಂಡ, ಆನೇಕಲ್ ಪೊಲೀಸ್ ಸಿಬ್ಬಂದಿ ಹಾಗೂ ಅಕ್ಷರ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಇಡೀ ದಿನ ಕಲ್ಯಾಣಿಯಲ್ಲಿ ಬೆಳೆದುಕೊಂಡಿದ್ದ ಗಿಡಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ. ಈ ಮೂಲಕ ಸ್ವಚ್ಚತಾ ಕಾರ್ಯ ನಡೆಸಿ ಕಲ್ಯಾಣಿಗೆ ಹೊಸ ರೂಪವನ್ನು ಕೊಟ್ಟಿರುವುದಕ್ಕೆ ಇಡೀ ಆನೇಕಲ್ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗ ನಾವು ಕಲ್ಯಾಣಿಯನ್ನು ಸ್ವಚ್ಛಗೊಳಿಸಿದೇವೆ. ಆದರೆ ಕಲ್ಯಾಣಿಗೆ ಇದ್ದ ಕಲ್ಲಿನ ಮೆಟ್ಟಿಲುಗಳು ಸಡಿಲಗೊಂಡು ಕುಸಿದಿದ್ದು ಅವುಗಳನ್ನು ಸರಿಪಡಿಸಬೇಕು ಹಾಗೆ ಮುಂದಿನ ದಿನಗಳಲ್ಲಿ ಕಲ್ಯಾಣಿಯಲ್ಲಿ ನೀರು ನಿಲ್ಲುವಂತೆ ಮಾಡಿ ಪುರಾತನ ಇತಿಹಾಸ ಸಾರುವ ಕಲ್ಯಾಣಿಯನ್ನು ಉಳಿಸಿಕೊಂಡು ಹೋಗಬೇಕೆಂದು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಬೇಕೆಂದು ಸ್ವಚ್ಛತಾ ಕಾರ್ಯ ಮಾಡಿದವರು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *