ನ್ಯಾಯಾಧೀಶ ಪರೀಕ್ಷಾರ್ಥಿಗಳಿಗೆ ನ್ಯಾಯಾಧೀಶರ ಉಚಿತ ತರಬೇತಿ

Public TV
1 Min Read

ರಾಮನಗರ: ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಜಿಲ್ಲಾ ಒಂದನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮರುಳ ಸಿದ್ದರಾಮರವರು ಉಚಿತವಾಗಿ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿ ವಕೀಲರಿಗೆ ಭಾನುವಾರ ನ್ಯಾಯಾಲಯದ ಆವರಣದಲ್ಲಿ ವಿಶೇಷ ತರಬೇತಿಯನ್ನು ನಡೆಸುವ ಮೂಲಕ ಭೋಧನೆ ನೀಡಿದ್ರು.

ಕಳೆದ ಎರಡು ವಾರಗಳಿಂದ ಪ್ರತಿ ಭಾನುವಾರ ಜಿಲ್ಲೆಯ ಆಸಕ್ತ ವಕೀಲರಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 10ಕ್ಕೆ ಆರಂಭವಾದ ತರಗತಿಯೂ, ಸಂಜೆ 5ರವರೆಗೂ ನಡೆಯಿತು. ನ್ಯಾಯಾಧೀಶ ಮರುಳ ಸಿದ್ದರಾಮರವರ ಭೋಧನ ತರಗತಿಗೆ ರಾಮನಗರ ಜಿಲ್ಲೆಯ ವಕೀಲರಲ್ಲದೇ ತುಮಕೂರು, ಮೈಸೂರು, ಹಾಸನ ಜಿಲ್ಲೆಯ 40ಕ್ಕೂ ಹೆಚ್ಚು ವಕೀಲರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಭಾನುವಾರ ನಡೆದ ತರಗತಿಯಲ್ಲಿ ದಿವಾಣಿ ಪ್ರಕ್ರಿಯಾ ಸಂಹಿತೆ(ಸಿಪಿಸಿ) ಕುರಿತು ನ್ಯಾಯಾಧೀಶರು ವಕೀಲರಿಗೆ ಮನದಟ್ಟಾಗುವಂತೆ ಬೋಧನೆ ಮಾಡಿದರು. ಸಿಪಿಸಿ ಕಾಯ್ದೆ ಯಾವ ಕೇಸ್‍ಗಳಿಗೆಲ್ಲ ಅನ್ವಯವಾಗಲಿದೆ. ಅದರಿಂದ ಯಾವ ರೀತಿಯ ಕೇಸ್‍ಗಳಿಗೆ ಪರಿಹಾರ ನೀಡಬಹುದು. ಅಲ್ಲದೇ ಕೇಸ್ ಪರಿಗಣಿಸುವ ಸಂದರ್ಭದಲ್ಲಿ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ನ್ಯಾಯಾಧೀಶರು ಭೋಧನೆ ಮಾಡಿದರು. ಅದರಲ್ಲೂ ಪರೀಕ್ಷಾರ್ಥಿಗಳಿಗೆ ಬಹುಬೇಗನೆ ಅರ್ಥವಾಗಲೆಂದು ದಿವಾಣಿ ಪ್ರಕ್ರಿಯಾ ಸಂಹಿತೆಯ ಕುರಿತು ಸರಳವಾಗಿ ಅರ್ಥವಾಗುವಂತೆ ವಿವರಿಸಿದರು.

ನ್ಯಾಯಾಧೀಶರ ಈ ಉಚಿತ ತರಬೇತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ವಕೀಲರಾದ ಎಸ್.ವೀರಭದ್ರಯ್ಯ, ಜಿಲ್ಲೆಗೆ ನ್ಯಾಯಾಧೀಶರಾಗಿ ಆಗಮಿಸಿರುವ ಮರುಳ ಸಿದ್ದರಾಮ ಅವರು ಯುವ ಹಾಗೂ ನ್ಯಾಯಾಧೀಶರಾಗಬೇಕೆಂದು ಕನಸು ಕಾಣುತ್ತಿರುವ ವಕೀಲರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ತಮ್ಮ ಭಾನುವಾರದ ಬಿಡುವಿನ ವೇಳೆಯಲ್ಲಿ ವಿಶೇಷ ತರಗತಿ ಆಯೋಜನೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ ಭಾನುವಾರವೂ ನ್ಯಾಯಾಲಯದ ಆವರಣದಲ್ಲಿ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿತ್ತು. ಅದು ಈ ವಾರವೂ ಸಹ ಮುಂದುವರಿದಿದೆ. ನ್ಯಾಯಾಧೀಶರ ಈ ನಿಸ್ವಾರ್ಥ ಹಾಗೂ ಯುವ ಸಮುದಾಯಕ್ಕೆ ಅನುಕೂಲವಾಗಲೆಂದು ನಡೆಸುತ್ತಿರುವ ಉಚಿತ ತರಬೇತಿಯ ಬಗ್ಗೆ ಇದೀಗ ರಾಜ್ಯದ ಹಲವೆಡೆಗಳಿಂದಲೂ ಸಹ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *