ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ| ಸಂಸತ್‌ನಲ್ಲಿ ಮಹಾಭಿಯೋಗಕ್ಕೆ ತಯಾರಿ – ಸುಪ್ರೀಂ ಮೆಟ್ಟಿಲೇರಿದ ನ್ಯಾ.ಯಶವಂತ್ ವರ್ಮಾ

Public TV
3 Min Read

ನವದೆಹಲಿ: ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಪತ್ತೆಯಾದ ಕಂತೆ ಕಂತೆ ನೋಟು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ (Allahabad High Court) ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Yashwant Varma) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧದ ಆಂತರಿಕ ಸಮಿತಿ ನೀಡಿದ ವರದಿಯನ್ನು ಅವರು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿ ವರ್ಮಾ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಾಭಿಯೋಗ (Impeachment – ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿಯ ಮೇಲೆ ಗಂಭೀರ ಆರೋಪ ಬಂದಾಗ ಅವರನ್ನು ಅಧಿಕಾರದಿಂದ ತೆಗೆದುಹಾಕಲು ಸಂಸತ್ತಿಗೆ ಇರುವ ಅಧಿಕಾರವನ್ನು ಮಹಾಭಿಯೋಗ ಎನ್ನುತ್ತಾರೆ) ನಿರ್ಣಯ ಮಂಡಿಸಲು ತಯಾರಿ ಆರಂಭಿಸಿದೆ ಎಂಬ ವರದಿಗಳು ಬಂದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ,ನ್ಯಾ. ವರ್ಮಾ ಅವರು ನಿವೃತ್ತ ಸಿಜೆಐ ಸಂಜೀವ್ ಖನ್ನಾ ಅವರು ಹೈಕೋರ್ಟ್ ನ್ಯಾಯಾಧೀಶ ಸ್ಥಾನದಿಂದ ತಮ್ಮನ್ನು ವಜಾಗೊಳಿಸುವಂತೆ ಮಾಡಿದ ಶಿಫಾರಸನ್ನು ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿದ್ದಾರೆಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್ಶಾ

ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಯ ಆಂತರಿಕ ಕಾರ್ಯವಿಧಾನವನ್ನು ನ್ಯಾಯಮೂರ್ತಿ ವರ್ಮಾ ಪ್ರಶ್ನಿಸಿದ್ದಾರೆ. ಇದು ಸಂಸತ್ತಿನಲ್ಲಿ (Parliament) ಹೈಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಅಧಿಕಾರವನ್ನು ಪ್ರತ್ಯೇಕವಾಗಿ ಹೊಂದಿರುವ ಕಾನೂನಿನಿಂದ ಅವಮಾನಿಸುವ ಸಮಾನಾಂತರ, ಸಾಂವಿಧಾನಿಕವಲ್ಲದ ಕಾರ್ಯವಿಧಾನವನ್ನು ಸೃಷ್ಟಿಸುತ್ತದೆ ಎಂದು ವಾದಿಸಿದ್ದಾರೆ.

ನ್ಯಾಯಾಧೀಶರ (ವಿಚಾರಣಾ) ಕಾಯ್ದೆ, 1968 ರ ಅಡಿಯಲ್ಲಿ ಒದಗಿಸಲಾದ ಸುರಕ್ಷತಾ ಕ್ರಮಗಳನ್ನು ಆಂತರಿಕ ಕಾರ್ಯವಿಧಾನವು ಹೊಂದಿಲ್ಲ. ಯಾವುದೇ ಔಪಚಾರಿಕ ದೂರು ದಾಖಲಾಗದೇ ಇದ್ದಾಗ ತನ್ನ ವಿರುದ್ಧ ಆಂತರಿಕ ವಿಚಾರಣೆ ನಡೆಸಲಾಗಿದೆ. ಇದು ಅನುಚಿತ ಮತ್ತು ಅಮಾನ್ಯವಾಗಿದೆ. ಸುಪ್ರೀಂ ಕೋರ್ಟ್ ಪತ್ರಿಕಾ ಪ್ರಕಟಣೆಯ ಮೂಲಕ ಆರೋಪಗಳನ್ನು ಬಹಿರಂಗಪಡಿಸಿದ್ದರಿಂದ ಅವರು ಮಾಧ್ಯಮ ವಿಚಾರಣೆಗೆ ಒಳಪಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.  ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

ಮನೆಯಲ್ಲಿ ಕಂತೆ ಕಂತೆ ನೋಟು (Cash) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾ.ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಅವರನ್ನು ವಜಾಗೊಳಿಸುವಂತೆ ಮೂವರು ಹಿರಿಯ ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿಎಸ್ ಸಂಧಾವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್‌ ಇದ್ದ ಸಮಿತಿ ತನ್ನ ಅಂತಿಮ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿತ್ತು. ಇದನ್ನೂ ಓದಿ: ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ

ನ್ಯಾ. ಯಶವಂತ್ ವರ್ಮಾ ಅವರ ನಿವಾಸದೊಳಗೆ ನೋಟುಗಳ ದೊಡ್ಡ ರಾಶಿ ಇರುವುದನ್ನು ಹಲವು ಮಂದಿ ನೋಡಿದ್ದಾರೆ. ಆದರೆ ವರ್ಮಾ ಅವರು ಎಂದಿಗೂ ದೂರು ದಾಖಲಿಸಿಲ್ಲ ಅಥವಾ ನ್ಯಾಯಾಂಗದ ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಈ ನಡವಳಿಕೆಯನ್ನು ಅಸ್ವಾಭಾವಿಕ ಎಂದು ಕರೆದಿರುವ ಸಮಿತಿಯು ಅವರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ವರ್ಮಾ ಅವರು ಸಮರ್ಥನೀಯ ವಿವರಣೆಯನ್ನು ನೀಡಿಲ್ಲ. ಯಾವುದೇ ಪಿತೂರಿ ಇದ್ದರೆ ಅವರು ದೂರು ದಾಖಲಿಸಿಲ್ಲ ಯಾಕೆ? ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಸಮಿತಿ ಪ್ರಶ್ನಿಸಿತ್ತು.

ನ್ಯಾ. ವರ್ಮಾ ಅವರ ಮಗಳು ಸೇರಿದಂತೆ 55 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಸಮಿತಿ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯಿಂದ ಕೋಣೆಯ ನೆಲದಾದ್ಯಂತ ಹರಡಿರುವ 500 ರೂ. ನೋಟುಗಳ ದೊಡ್ಡ ರಾಶಿಯನ್ನು ವಿಡಿಯೋ ಮತ್ತು ಫೋಟೋಗಳನ್ನು ಪರಿಶೀಲಿಸಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ನೋಡಿ ನನಗೆ ಆಘಾತ ಮತ್ತು ಆಶ್ಚರ್ಯವಾಯಿತು. ನನ್ನ ಜೀವನದಲ್ಲಿ ಇಷ್ಟೊಂದು ಹಣವನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ ಎಂದು ಒಬ್ಬ ಸಾಕ್ಷಿ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿತ್ತು.

Share This Article