ಮಂಡ್ಯದಲ್ಲಿ ಜೋಡೆತ್ತು ಗಣಪ-ಲೋಕ ಸಮರದ ಡೈಲಾಗ್‍ಗಳೇ ಮೂರ್ತಿ ಥೀಮ್

Public TV
2 Min Read

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿದ್ದು ನಟ ದರ್ಶನ್ ಹೇಳಿದ್ದ ಜೋಡೆತ್ತು ಎಂಬ ಮಾತು. ನಾವು ಚುನಾವಣೆಯಲ್ಲಿ ಜೋಡೆತ್ತಿನಂತೆ ದುಡಿಯುತ್ತೇವೆ ಎಂಬ ಅವರ ಹೇಳಿಕೆ ಸಾಕಷ್ಟು ವಾದ-ವಿವಾದವನ್ನ ಹುಟ್ಟುಹಾಕಿತ್ತು.

ದರ್ಶನ್ ಅವರ ಈ ಮಾತಿಗೆ ಕೌಂಟರ್ ನೀಡಿದ್ದ ಸಿಎಂ ಅದು ಕಳ್ಳೆತ್ತಿನ ಜೋಡಿ ನಾನು ಹಾಗೂ ಸಚಿವ ಡಿ.ಕೆ.ಶಿವಕುಮಾರ್ ನಿಜವಾದ ಜೋಡೆತ್ತುಗಳು ಎಂದು ಹೇಳಿಕೆ ನೀಡಿದ್ದರು. ಹೀಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಜೋಡೆತ್ತು ಎಂಬ ವಿಚಾರವನ್ನೇ ಬಳಕೆ ಮಾಡಿಕೊಂಡಿರೋ ಕಲಾವಿದರೊಬ್ಬರು ಈ ಬಾರಿಯ ಗೌರಿ ಗಣೇಶ ಹಬ್ಬದಲ್ಲಿ ಜೋಡೆತ್ತಿನ ಗಣಪನ ನಿರ್ಮಾಣದಲ್ಲಿ ತೊಡಗಿದ್ದಾರೆ. ಅಲ್ಲದೆ ಸುಮಲತಾ ಅವರ ಪಕ್ಷೇತರ ಚಿಹ್ನೆ ಕಹಳೆ ಗಣಪನನ್ನೂ ನಿರ್ಮಿಸಲಾಗುತ್ತಿದೆ.

ಲೋಕಸಭಾ ಚುನಾವಣೆ ಸಮಯದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಚುನಾವಣೆ ಪ್ರಕ್ರಿಯೆ ಆರಂಭದ ದಿನದಿಂದ ಮುಗಿಯುವರೆಗೂ ಸಾಕಷ್ಟು ವಿಚಾರಗಳು ಮಂಡ್ಯದ ಅಂಗಳದಲ್ಲಿ ಚರ್ಚೆಗೆ ಬಂದಿದ್ದವು. ಸಂಸದೆ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧಿಸುವುದನ್ನ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖಚಿತ ಪಡಿಸಿದಾಗ ಜೊತೆಯಲ್ಲೇ ಹಾಜರಿದ್ದ ನಟ ದರ್ಶನ್ ಅವರು ಹೇಳಿದ್ದ ಮಾತು ಈ ಬಾರಿಯ ಗೌರಿ ಗಣೇಶ ಹಬ್ಬದ ಮೇಲೂ ಪರಿಣಾಮ ಬೀರಿದೆ. ಅವರು ಚುನಾವಣೆಯಲ್ಲಿ ನಾನು ಮತ್ತು ಯಶ್, ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದರು.

ಆ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡಿತ್ತು. ಅದೇ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡಿನ ಕಲಾವಿದ ಸಂಜು ಕುಮಾರ್, ಈಗ ಜೋಡೆತ್ತಿನ ಗಣಪನ ನಿರ್ಮಾಣದಲ್ಲಿ ತೊಡಗಿದ್ದಾರೆ. ಜೋಡೆತ್ತಿನ ಗಣಪನಿಗೆ ಸಾಕಷ್ಟು ಬೇಡಿಕೆ ಇದ್ದು ಇನ್ನೂ ಹೆಚ್ಚಿನ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಜೋಡೆತ್ತು ಅನ್ನೋದು ಹಳ್ಳಿಗಾಡಿನ ಪ್ರದೇಶದಲ್ಲಿ ಆರಂಭದಿಂದಲೂ ಚಾಲ್ತಿಯಲ್ಲಿತ್ತಾದರೂ, ಅದು ಲೋಕಸಭಾ ಚುನಾವಣೆ, ಅದರಲ್ಲೂ ಮಂಡ್ಯದಲ್ಲಿ ಸಾಕಷ್ಟು ಪ್ರಭಾವ ಪಡೆದುಕೊಂಡಿತ್ತು. ಕಲಾವಿದ ಸಂಜು ಕುಮಾರ್ ಅಪ್ಪಟ ಮಣ್ಣಿನಲ್ಲಿ ಸ್ವತಃ ತಾವೇ ಜೋಡೆತ್ತಿನ ಗಣಪನನ್ನ ನಿರ್ಮಿಸಲಾರಂಭಿಸಿದ್ದಾರೆ. ಇವರು ನಿರ್ಮಿಸಿರುವ ಜೋಡೆತ್ತಿನ ಗಣಪ ಕಚ್ಚೆಯನ್ನುಟ್ಟು, ಸೂಟ್ ಹಾಕಿರುವ ಗಣಪ, ತಲೆಯಲ್ಲಿ ಪೇಟ ಕಟ್ಟಿಕೊಂಡು ತನ್ನ ಎರಡೂ ಕೈಗಳಲ್ಲಿ ಜೋಡೆತ್ತುಗಳನ್ನ ಹಿಡಿದುಕೊಂಡು ನಿಂತಿರುವ ರೈತ ಗಣಪನಾಗಿದ್ದಾನೆ.

ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ಜೋಡೆತ್ತಿನ ವಿಚಾರವನ್ನೇ ಮುಂದಿಟ್ಟುಕೊಂಡು, ಆ ಪದಕ್ಕಿರುವ ಪ್ರಖ್ಯಾತಿಯನ್ನೇ ಬಳಕೆ ಮಾಡಿಕೊಂಡಿರುವ ಕಲಾವಿದ ಈ ಬಾರಿಯ ಗೌರಿ ಗಣೇಶ ಹಬ್ಬದಂದು ಹೊಸ ಮಾರುಕಟ್ಟೆಯನ್ನೇ ನಿರ್ಮಿಸಲು ಹೊರಟಿದ್ದಾರೆ. ಆ ಮೂಲಕ ಅಂದು ಬಾರಿ ಸುದ್ದಿಯಾಗಿದ್ದ ಜೋಡೆತ್ತು ವಿಚಾರ ಹಬ್ಬದಲ್ಲೂ ಬಾರಿ ಕಮಾಲು ಮಾಡಲಿದೆ.

Share This Article
Leave a Comment

Leave a Reply

Your email address will not be published. Required fields are marked *