ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ

Public TV
1 Min Read

ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ತೀವ್ರವಾದ ಬಿಸಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 8 ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಇದು ಜಾರಿಯಲ್ಲಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ್ ಸಿಂಗ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಎಲ್ಲಾ ವರ್ಗದ ಶಾಲೆಗಳಿಗೆ ಇದು ಅನ್ವಯಿಸುತ್ತದೆ. ಆದರೆ ಸರ್ಕಾರಿ, ಸರ್ಕಾರೇತರ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

ಸಮಯ ಬದಲಾವಣೆ: ಪ್ರತಿದಿನ ಶಾಲೆಗೆ ಹಾಜರಾಗಬೇಕಾದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಬೇಸಿಗೆ ರಜೆಯ ಬಗ್ಗೆ ಪ್ರತ್ಯೇಕ ಆದೇಶವನ್ನು ನೀಡಲಾಗುವುದು ಎಂದು ಅದು ತಿಳಿಸಿದೆ. 9 ರಿಂದ 12 ರವರೆಗಿನ ತರಗತಿಗಳು ಮುಂದುವರಿಯುತ್ತದೆ. ಅವರು ಪ್ರಾರ್ಥನೆ, ಕ್ರೀಡೆಗಳು ಮತ್ತು ಇತರ ಚಟುವಟಿಕೆಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ 11.30 ರವರೆಗೆ ತರಗತಿಗಳು ನಡೆಯುತ್ತವೆ.

ಹವಾಮಾನ ಇಲಾಖೆಯು ಜಾರ್ಖಂಡ್‌ನ 13 ಜಿಲ್ಲೆಗಳಿಗೆ ಏಪ್ರಿಲ್ 30 ಮತ್ತು ಮೇ 1 ರಂದು ಬಿಸಿಗಾಳಿ ಎಚ್ಚರಿಕೆಯನ್ನು ನೀಡಿದೆ. ಭಾರತದ ಹವಾಮಾನ ಇಲಾಖೆ (IMD) ಪೂರ್ವ ಭಾರತದಲ್ಲಿ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪೂರ್ವ ಭಾರತದಾದ್ಯಂತ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಎಚ್ಚರಿಕೆ ನೀಡಿದೆ.

Share This Article