ಜೆಟ್‌ ಏರ್‌ವೇಸ್ ಸಿಬ್ಬಂದಿ ಎಡವಟ್ಟಿನಿಂದಾಗಿ ಪ್ರಯಾಣಿಕರ ಕಿವಿ, ಮೂಗಲ್ಲಿ ರಕ್ತ ಬಂತು! ನಿಜವಾಗಿ ಆಗಿದ್ದು ಏನು?

Public TV
2 Min Read

ನವದೆಹಲಿ: ಜೆಟ್ ಏರ್ ವೇಸ್ ವಿಮಾನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಪ್ರಯಾಣಿಕರ ಕಿವಿ, ಮೂಗಿನಲ್ಲಿ ರಕ್ತ ಬಂದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಮುಂಬೈನಿಂದ ಜೈಪುರಕ್ಕೆ ಹಾರಾಟ ನಡೆಸಿದ್ದ ಜೆಟ್ ಏರ್ ವೇಸ್ ವಿಮಾನ ಸಿಬ್ಬಂದಿ ಬ್ಲೀಡ್ ಸ್ವಿಚ್ ಆನ್ ಮಾಡದ ಕಾರಣ ಪ್ರಯಾಣಿಕರ ಮೂಗು, ಕಿವಿಯಲ್ಲಿ ರಕ್ತ ಬಂದಿದೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ನಾಗರಿಕ ವಿಮಾನಯಾನ ಸಚಿವಾಲಯ(ಡಿಜಿಸಿಎ) ತಕ್ಷಣವೇ ಈ ಪ್ರಕರಣಕ್ಕೆ ಸಂಬಂಧಿಸದಂತೆ ವರದಿ ನೀಡುವಂತೆ ಸೂಚಿಸಿದೆ.

ಆಗಿದ್ದು ಏನು?
ಇಂದು ಬೆಳಗ್ಗೆ 5.50ರ ಸಮಯದಲ್ಲಿ ಮುಂಬೈ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಜೆಟ್ ಏರ್ ವೇಸ್ ವಿಮಾನ 166 ಪ್ರಯಾಣಿಕರೊಂದಿಗೆ ಹಾರಾಟ ಆರಂಭಿಸಿತ್ತು. ಆದರೆ ವಿಮಾನ ಹಾರಾಟದ ಸಂದರ್ಭದಲ್ಲಿ ಕ್ಯಾಬಿನ್ ಒತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಅಳವಡಿಸಿದ್ದ ಸ್ವಿಚನ್ನು ಆನ್ ಮಾಡಲು ಸಿಬ್ಬಂದಿ ಮರೆತಿದ್ದರು. ಇದರಿಂದ ವಿಮಾನದಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಒತ್ತಡ ತಡೆಯಲಾಗದೇ ತಲೆನೋವು ಕಾಣಿಸಿಕೊಂಡು ಬಳಿಕ ಮೂಗು ಹಾಗೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಈ ವೇಳೆ ಪ್ರಯಾಣಿಕರು ಆಸನದ ಮೇಲಿದ್ದ ಆಮ್ಲಜನಕದ ಮಾಸ್ಕನ್ನು ಧರಿಸುವ ಮೂಲಕ ಅಪಾಯದಿಂದ ಪಾರಾದರು.

ಜೆಟ್ ಏರ್ ವೇಸ್‍ನ 737 ಬೋಯಿಂಗ್ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನ ಹಾರಾಟದ ಸಂದರ್ಭದಲ್ಲಿ ಒಟ್ಟು 166 ಮಂದಿ ಪ್ರಯಾಣಿಕರು ಹಾಗೂ 5 ಸಿಬ್ಬಂದಿ ಇದ್ದರು ಎಂದು ವಿಮಾನಯಾನ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಪ್ರಯಾಣಿಕರು ಅಸ್ವಸ್ಥರಾಗುತ್ತಿದ್ದಂತೆ 45 ನಿಮಿಷಗಳ ಹಾರಾಟದ ಬಳಿಕ ಮತ್ತೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಅಸ್ವಸ್ಥಗೊಂಡಿದ್ದ ಪ್ರಯಾಣಿಕರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಉಳಿದ ಪ್ರಯಾಣಿಕರಿಗೆ ಮತ್ತೊಂದು ವಿಮಾನದ ಮೂಲಕ ಜೈಪುರಕ್ಕೆ ತೆರಳಲು ವ್ಯವಸ್ಥೆ ಮಾಡಿದ್ದಾಗಿ ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಮಾಹಿತಿ ನೀಡಿದೆ.

ಈ ಘಟನೆ ಕುರಿತು ಎಎಐಬಿ ತನಿಖೆಗೆ ಆದೇಶಿಸಿದ್ದು, ಡಿಜಿಸಿಎಗೆ ದೂರನ್ನೂ ನೀಡಲಾಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ವಿಮಾನ ಸಿಬ್ಬಂದಿಯ ನಿರ್ಲಕ್ಷ್ಯತನದಿಂದಲೇ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ ಎಂದು ಹೇಳಲಾಗಿದೆ. ಡಿಜಿಸಿಎ ಘಟನೆ ವೇಳೆ ಕರ್ತವ್ಯದಲ್ಲಿದ್ದ ಐವರು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದೆ.

ಆಗಿದ್ದು ಏನು?
ಮಾಧ್ಯಮಗಳಲ್ಲಿ ಪ್ರಕಟವಾದಂತೆ ವಿಮಾನದಲ್ಲಿನ ಆಸನಗಳು ಭರ್ತಿಯಾಗಿ ಹಾರುವ ಸಂದರ್ಭದಲ್ಲಿ ಪೈಲಟ್ ಗಳು ಎಂಜಿನ್ ಗಾಳಿಯನ್ನು ಸ್ವಿಚ್ ಆಫ್ ಮಾಡುತ್ತಾರೆ. ವಿಮಾನ ಮೇಲಕ್ಕೆ ಹಾರಿದ ನಂತರ ಬ್ಲೀಡ್ ಸ್ವಿಚ್ ಅನ್ನು ಆನ್ ಮಾಡುತ್ತಾರೆ. ಇದರಿಂದಾಗಿ ಗಾಳಿ ಕ್ಯಾಬಿನ್ ಒಳಗಡೆ ಬರುತ್ತದೆ. ವಿಮಾನದ ಒಳಗಡೆ ಅಮ್ಲಜನಕ ಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ಪೈಲಟ್ ವಿಮಾನ ಹಾರುವ ಸಂದರ್ಭದಲ್ಲಿ ಬ್ಲೀಡ್ ಸ್ವಿಚ್ ಅನ್ನು ಆಫ್ ಮಾಡಿದ್ದಾರೆ. ಆದರೆ ನಂತರ ಈ ಸ್ವಿಚ್ ಅನ್ನು ಆನ್ ಮಾಡುವಲ್ಲಿ ಮರೆತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *