ಚಿತ್ರ: ಜೀವ್ನಾನೇ ನಾಟ್ಕ ಸಾಮಿ
ನಿರ್ದೇಶನ: ರಾಜು ಭಂಡಾರಿ ರಾಜಾವರ್ತ
ನಿರ್ಮಾಪಕ: ಲಲಿತ ರಾಜಶೇಖರ ಶಿರಹಟ್ಟಿ
ಸಂಗೀತ: ಅತಿಶಯ ವೇದಾಂತ್ ಜೈನ್
ಛಾಯಾಗ್ರಹಣ: ಕಿಟ್ಟಿ ಕೌಶಿಕ್
ತಾರಾಬಳಗ: ಕಿರಣ್ ರಾಜ್, ಶ್ರೀಹರ್ಷ, ಅನಿಕಾ ರಮ್ಯ, ಪವಿತ್ರಾ ಕೊಟ್ಯಾನ್, ಇತರರು.
‘ಜೀವ್ನಾನೇ ನಾಟ್ಕ ಸಾಮಿ’ ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ. ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ಇದ್ರು ಕೂಡ ಮೊದಲ ದಿನ ಸಿನಿಮಾ ಬಿಡುಗಡೆಯಾದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸುತ್ತಿರುವ ಆಕಾಶ್ ನದ್ದು ಮಧ್ಯಮ ವರ್ಗದ ಕುಟುಂಬ. ತನ್ನೆಲ್ಲ ಕಷ್ಟಗಳ ನಡುವೆ ಆತನಿಗೆ ನಿರ್ದೇಶಕನಾಗಬೇಕೆಂಬ ಕನಸಿರುತ್ತೆ. ಹೀಗಿರುವಾಗ ಆಕಾಶ್ ಪುತ್ರಿ ಅದಿತಿ ‘ಜೀವ್ನಾನೇ ನಾಟ್ಕ ಸಾಮಿ’ ಎಂಬ ಮಕ್ಕಳ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾಳೆ.ಇದನ್ನೂ ಓದಿ:ಜೀವನ ಪಾಠ ಹೇಳಲು ಬರ್ತಿದ್ದಾರೆ ಕನ್ನಡತಿ ಖ್ಯಾತಿಯ ಕಿರಣ್ ರಾಜ್!
ಒಂಭತ್ತು ಜನ ಮಕ್ಕಳು ಈ ಶೋನಲ್ಲಿ ಭಾಗಿಯಾಗಿರುತ್ತಾರೆ. ಪ್ರತಿಯೊಬ್ಬ ಮಗುವಿನ ಹಾಗೂ ಪೋಷಕರ ಮನಸ್ಥಿತಿ, ಆಕಾಂಕ್ಷೆ ಒಬ್ಬರಿಗಿಂತ ಒಬ್ಬರದ್ದು ಬಹಳ ವಿಭಿನ್ನ. ಅವರೆಲ್ಲ ರಿಯಾಲಿಟಿ ಶೋನಲ್ಲಿ ಗೆಲ್ಲಲೇ ಬೇಕು ಎಂದು ಏನೆಲ್ಲ ಮಾಡುತ್ತಾರೆ. ಮಕ್ಕಳ ಹಾಗೂಪೋಷಕರ ಜೀವನದಲ್ಲಿ ಈ ಶೋ ಯಾವೆಲ್ಲ ಪರಿಣಾಮ ಉಂಟು ಮಾಡುತ್ತೆ ಎನ್ನುವುದು ಚಿತ್ರದ ಕಥಾವಸ್ತು.
ಕೊನೆಗೆ ಎಲ್ಲರಿಗೂ ಒಂದು ಜೀವನ ಪಾಠವಾಗಿ ‘ಜೀವ್ನಾನೇ ನಾಟ್ಕ ಸಾಮಿ’ ಶೋ ಹೇಗೆ ಕೊನೆಗಾಣುತ್ತೆ ಎನ್ನುವುದೇ ಸಿನಿಮಾದ ಇಂಟ್ರಸ್ಟಿಂಗ್ ಫ್ಯಾಕ್ಟರ್. ನಿರ್ದೇಶಕರ ಪ್ರಯತ್ನ ಹಾಗೂ ಪ್ರಯೋಗಾತ್ಮಕತೆಯನ್ನು ಮೆಚ್ಚಲೇಬೇಕು. ಮಕ್ಕಳ ರಿಯಾಲಿಟಿ ಶೋ ಆಧಾರವಾಗಿಟ್ಟುಕೊಂಡು ಅದನ್ನು ಸಿನಿಮಾವಾಗಿ ಕಟ್ಟಿಕೊಡುವ ಅವರ ಆಲೋಚನೆಯೇ ಗಮನಾರ್ಹ. ಇದನ್ನೂ ಓದಿ:ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ ‘ಜೀವ್ನಾನೇ ನಾಟ್ಕ ಸಾಮಿ’
ಚಿತ್ರಕಥೆ ಹಾಗೂ ತೆರೆ ಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕರ ಚಾಕಚಕ್ಯತೆ ಪ್ರಶಂಸನೀಯ. ಚಿತ್ರದಲ್ಲಿ ಆಕಾಶ್ ಹಾಗೂ ಸಂತೋಷ್ ಪಾತ್ರಧಾರಿಗಳಾದ ಕಿರಣ್ ರಾಜ್ ಮತ್ತು ಶ್ರೀಹರ್ಷ ತಮ್ಮ ನೈಜ ಅಭಿನಯದ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಾಯಕಿಯರಾದ ಪದ್ಮಶ್ರೀ ಜೈನ್, ಅನಿಕಾ ರಮ್ಯ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದೇವಯ್ಯ, ಮಹದೇವ್, ಜೋಕರ್ ಹನುಮಂತು, ಶ್ರಾವ್ಯ ಆಚಾರ್ಯ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅತಿಶಯ ವೇದಾಂತ್ ಜೈನ್ ಸಂಗೀತ ಕಥೆಗೆ ಪೂರಕವಾಗಿದ್ದು, ಮಾನಸ ಹೊಳ್ಳ ಹಾಡಿರುವ ಹತ್ತಿಯ ಮರಕೆ ಜನಪದ ಹಾಡು ಮನಮುಟ್ಟುತ್ತದೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಗಮನ ಸೆಳೆಯುತ್ತದೆ.
ರೇಟಿಂಗ್: 3/5

 
			

 
		 
		 
                                
                              
		