ಉಡುಪಿ: ಹಣಕಾಸಿನ ಸಮಸ್ಯೆಗೆ ಸಿಲುಕಿ ಜಿಲ್ಲಾ ಜೆಡಿಎಸ್ ಪಕ್ಷದ ವಕ್ತಾರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೊರಂಗ್ರಪಾಡಿ ಬೈಲೂರುನಲ್ಲಿ ನಡೆದಿದೆ.
ಜಾತ್ಯತಿತ ಜನತಾ ದಳದ (ಜೆಡಿಎಸ್) ಜಿಲ್ಲಾ ವಕ್ತಾರ, ಭಿರ್ತಿ ಕೋ. ಅಪರೇಟಿವ್ ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಜಿ. ಬೈಲೂರು (37) ಆತ್ಮಹತ್ಯೆ ಶರಣಾದವರು. ಕಳೆದ ರಾತ್ರಿ ತಂದೆ-ತಾಯಿ ತೀರ್ಥಹಳ್ಳಿಯ ಮನೆಗೆ ಹೋಗಿದ್ದಾಗ ಕೊರಂಗ್ರಪಾಡಿ ಜಂಕ್ಷನ್ ಬಳಿಯ ತಮ್ಮ ಬಾಡಿಗೆ ಮನೆಯಲ್ಲಿ ಪ್ರದೀಪ್ ನೇಣಿಗೆ ಶರಣಾಗಿದ್ದಾರೆ.
ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಆರ್ಥಿಕ ಮುಗ್ಗಟ್ಟು ಕಾರಣವೆಂದು ಪೊಲೀಸರು ತಿಳಿಸಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ. ವಿವಾಹಿತರಾಗಿದ್ದ ಅವರು, ಕೆಲವು ಸಮಯಗಳ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.