ಜಯನಗರ ಚುನಾವಣೆ: ಜೆಡಿಎಸ್, ಕಾಂಗ್ರೆಸ್ ಮೈತ್ರಿ

Public TV
1 Min Read

ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತಿಗೆ ಮಾಜಿ ಪ್ರಧಾನಿ ಒಪ್ಪಿಗೆ ನೀಡಿದ್ದರಿಂದ ಮೈತ್ರಿ ಯಶಸ್ವಿಯಾಗಿದೆ.

ಮೈತ್ರಿ ವಿಚಾರವಾಗಿ ಮಾತನಾಡಲು ರಾಮಲಿಂಗಾರೆಡ್ಡಿ ದೇವೇಗೌಡರ ನಿವಾಸಕ್ಕೆ ಆಗಮಿಸಿದ್ರು. ತಮ್ಮ ಮಗಳು ಸ್ಪರ್ಧೆ ಮಾಡ್ತಿರೋದ್ರೀಂದ ಬೆಂಬಲ ನೀಡುವಂತೆ ರಾಮಲಿಂಗಾರೆಡ್ಡಿ ದೇವೇಗೌಡರಿಗೆ ಕೇಳಿಕೊಂಡ್ರು. ರಾಮಲಿಂಗಾರೆಡ್ಡಿ ಮಾತಿಗೆ ಓಕೆ ಅಂದಿರೋ ದೇವೇಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ.

ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಮೈತ್ರಿಯಿಂದ ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹೋರಾಟ ನಡೆಯಲಿದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಮೇ 3 ರಂದು ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದರು. ಹೀಗಾಗಿ ಈಗ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಬಿಜೆಪಿ ಜಯನಗರದ ಟಿಕೆಟ್ ನೀಡಿದೆ.

2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.

Share This Article
Leave a Comment

Leave a Reply

Your email address will not be published. Required fields are marked *