ಉತ್ತರ ಕರ್ನಾಟಕ ಪ್ರವಾಹ – 1 ತಿಂಗಳ ಸಂಬಳ ನೀಡಲು ಜೆಡಿಎಸ್ ಶಾಸಕರ ನಿರ್ಧಾರ

Public TV
2 Min Read

ಬೆಂಗಳೂರು: ಉತ್ತರ ಕರ್ನಾಟಕ ನೆರೆ ಹಿನ್ನೆಲೆಯಲ್ಲಿ ಒಂದು ತಿಂಗಳ ಸಂಬಳವನ್ನು ನೀಡಲು ಜೆಡಿಎಸ್ ಶಾಸಕರು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಎಲ್ಲಾ ಶಾಸಕರ ಒಂದು ತಿಂಗಳ ಸಂಬಳ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬಿರುವ ಎಚ್‍ಡಿಕೆ, ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ. ಬೆಳಗಾವಿ, ರಾಯಚೂರು, ಹಾಸನ, ಕೊಡಗು ಹಾಗೂ ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳು ಶ್ರಮ ಪಡುತ್ತಿರುವ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

ಜ್ವರದಿಂದ ಬಳಲುತ್ತಿರುವ ಕಾರಣ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದು ಎಚ್‍ಡಿಕೆ ತಿಳಿಸಿದ್ದಾರೆ.

ಪ್ರವಾಹ ಸಂಕಷ್ಟ ಎದುರಿಸುತ್ತಿದ್ದ ಜನರ ನೆರವಿಗೆಬಾರದ ಸಿಎಂ ಯಡಿಯೂರಪ್ಪ ಅವರು ದೆಹಲಿಯಲ್ಲಿ ಇದ್ದಾರೆ ಎಂದು ಟೀಕೆ ಮಾಡಿದ್ದ ಜೆಡಿಎಸ್, ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ಕಲ್ಪಿಸಿದವರು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

ಇತ್ತ ಕಳೆದ 2 ದಿನಗಳಿಂದ ಪ್ರವಾಹ ಎದುರಿಸುತ್ತಿರುವ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಕೃಷ್ಣಾ, ಮಲಪ್ರಭಾ, ಘಟಪ್ರಭಾ ತ್ರಿವಳಿ ನದಿಗಳ ಪ್ರವಾಹದ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಅಲ್ಲದೇ ಬಾಗಲಕೋಟೆ ನೆರೆ ಸಂತ್ರಸ್ತರಿಗೆ ಸರ್ಕಾರ ಕಲ್ಪಿಸಿದ್ದ ಪರಿಹಾ ಕೇಂದ್ರಗಳಿಗೆ ಭೇಟಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *