ಈಗ ಕಿಂಗ್ ಮೇಕರ್, ಮುಂದೆ ನಾವೇ ಕಿಂಗ್ ಆಗ್ತೀವಿ: ಎಚ್‍ಡಿಕೆ

Public TV
3 Min Read

ಬೆಂಗಳೂರು: ಇವತ್ತು ಜೆಡಿಎಸ್ ಗೆ ಕಿಂಗ್ ಮೇಕರ್ ಸ್ಥಾನ ತೋರಿಸಿದ್ದೀರಿ. ಮುಂದೆ ನಾವೇ ಕಿಂಗ್ ಆಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸರ್ವೆ ಬಗ್ಗೆ ನನಗೆ ಆಕ್ಷೇಪ ಇಲ್ಲ. ನಿಮ್ಮ ವಿಧಾನದಲ್ಲಿ ನೀವು ಮಾಡಿದ್ದೀರಿ. ನಾನು ನಮ್ಮದೇ ವಿಧಾನದಲ್ಲಿ ಲೆಕ್ಕ ಹಾಕಿದ್ದೇನೆ ಎಂದು ತಿಳಿಸಿದರು.

ಗುಜರಾತ್ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದಾಗ ಬಿಜೆಪಿಗೆ 110ಕ್ಕೂ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಮಾಧ್ಯಮಗಳು ಹೇಳಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ 99ಕ್ಕೆ ಬಿಜೆಪಿ ಸುಸ್ತು ಹೊಡೆಯಿತು ಎಂದರು. ಇದನ್ನೂ  ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!

ಹಿರಿಯರ ಜೊತೆ ಸಂವಾದ: ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಿರಿಯ ನಾಗರಿಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಸ್ಥಾನ ನನ್ನಪ್ಪನ ಆಸ್ತಿ ಅಲ್ಲ. ಅವಕಾಶ ಕೊಟ್ಟರೆ ದಿನದ 20 ಗಂಟೆ ನಿಮಗಾಗಿ ಚಾಕರಿ ಮಾಡುತ್ತೇನೆ. ಅವಕಾಶ ಕೊಡದಿದ್ದರೆ ಮನೆಯಲ್ಲಿ ಕುಳಿತುಕೊಳ್ಳುವೆ. ಇದರಲ್ಲಿ ನನ್ನ ಆಸ್ತಿ ಏನು ಹೋಗಲ್ಲ ಎಂದು ಹೇಳಿದರು.

113 ಸ್ಥಾನವನ್ನು ಗೆಲ್ಲಲು ನಾನು ಹೊರಟಿದ್ದೇನೆ. ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು. ನಾನು ಅಧಿಕಾರಕ್ಕೆ ಬಂದರೆ 24 ತಾಸು ವಿಧಾನಸೌಧ ತೆರೆಯುತ್ತೇನೆ. ವಿಧಾನಸೌಧದ ಸುತ್ತ ಇರುವ ಬ್ಯಾರಿಕೇಡ್ ತಗೆಯುತ್ತೇನೆ. ನಾನು ಮುಖ್ಯಮಂತ್ರಿಯಾದ್ರೆ ಯಾರೂ ಬೇಕಾದ್ರೂ ಸಿಎಂ ಶರ್ಟ್ ಎಳೆದು ಪ್ರಶ್ನೆ ಮಾಡಬಹುದು ಎಂದು ಭರವಸೆ ನೀಡಿದರು.

ಆಕಸ್ಮಿಕ ಪ್ರವೇಶ: ಸರ್ವಸಂಘ ಪರಿತ್ಯಾಗಿ ಆದವರು ಆಧಿಕಾರ ನಡೆಸಬೇಕು. ಆಗ ಮಾತ್ರ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಸಾಧ್ಯ. ನಾನು ರಾಜಕೀಯಕ್ಕೆ ಬಂದಿದ್ದೇ ಆಕಸ್ಮಿಕ. ದೇವೇಗೌಡರ ಮಗ ಅನ್ನೋದು ಬಿಟ್ಟರೆ ನನಗೆ ಬೇರೆ ಯಾವುದೇ ಅರ್ಹತೆ ಇರಲಿಲ್ಲ. ಐಎಎಸ್ ಅಧಿಕಾರಿಗಳನ್ನು ನಂಬಿ ಆಡಳಿತ ಸಾಧ್ಯವಿಲ್ಲ. ಜನರ ಬಳಿ ಹೋದಾಗಲೇ ಸಮಸ್ಯೆ ಅರಿವಾಗುತ್ತದೆ ಎಂದು ಹೇಳಿದರು.

ಇಸ್ರೇಲ್ ಕೃಷಿಗೆ ಒತ್ತು: ಹಿರಿಯ ವ್ಯಕ್ತಿಯೊಬ್ಬರು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಸಾಲ ಮನ್ನಾ ಮಾಡಿದ ತಕ್ಷಣ ರೈತರು ಉದ್ಧಾರ ಆಗುವುದಿಲ್ಲ. ರೈತರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮ ತಂದರೆ ಮಾತ್ರ ಅವರು ಉದ್ಧಾರ ಆಗುತ್ತಾರೆ. ಇಸ್ರೇಲಿನಲ್ಲಿ ಸಮುದ್ರದ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲಿ ರೈತ ಮಾರುಕಟ್ಟೆ ದರದಲ್ಲಿ ನೀರು ಖರೀದಿಸಿ ಉತ್ತಮ ಕೃಷಿ ಮಾಡುತ್ತಿದ್ದಾನೆ. ನಮ್ಮಲ್ಲಿ ಉಚಿತ ನೀರು ಉಚಿತ ವಿದ್ಯುತ್ ಕೊಟ್ಟರೂ ರೈತರು ಯಾಕೆ ಅಭಿವೃದ್ಧಿ ಹೊಂದುತ್ತಿಲ್ಲ? ಅನಾರೋಗ್ಯದ ನಡುವೆಯೂ ನಾನು ಇಸ್ರೇಲ್ ಕೃಷಿ ಪದ್ಧತಿ ಅಧ್ಯಯನ ಮಾಡಿದ್ದೇನೆ. ನಮ್ಮ ಸರ್ಕಾರ ಬಂದಲ್ಲಿ ಇಸ್ರೇಲ್ ಮಾದರಿಯ ಕೃಷಿಗೆ ಆದ್ಯತೆ ನೀಡಲಾಗುವುದು ಎಂದು ಎಚ್‍ಡಿಕೆ ಉತ್ತರಿಸಿದರು.

ನಾವು ಕೆಲ್ಸ ಮಾಡಿಲ್ಲವೇ: ಮಾದ್ಯಮಗಳ ಸಮೀಕ್ಷೆಗಳು ಏನಾದರೂ ಬರಲಿ. ಜ್ಯೋತಿಷಿಗಳು ಏನಾದರೂ ಹೇಳಿಕೊಳ್ಳಲಿ. ಆದರೆ ನನಗೆ ನಮ್ಮ ಸರ್ಕಾರ ಬಂದೇ ಬರುತ್ತದೆ ಎನ್ನುವ ವಿಶ್ವಾಸವಿದೆ. ಸಮೀಕ್ಷೆ ಗಳು ಎಲ್ಲೋ ಕೆಲವು ಸಲ ನಿಜವಾಗಿರಬಹುದು. ಮಾಧ್ಯಮಗಳ ಸಮೀಕ್ಷೆ ಬಗ್ಗೆ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಪದೇ ಪದೇ ಕಾಂಗ್ರೆಸ್ 100 ಸ್ಥಾನ, ಬಿಜೆಪಿ 80 ಅಂತೆಲ್ಲಾ ಮಾಧ್ಯಮದವರು ತೋರಿಸುತ್ತಾರೆ. ಯಾಕೆ ನಾವು ಏನೂ ಕೆಲಸ ಮಾಡಿಲ್ಲವಾ ಎಂದು ಮಾಧ್ಯಮಗಳ ಸಮೀಕ್ಷೆ ಬಗ್ಗೆ ಪ್ರಶ್ನಿಸಿ ಪರೋಕ್ಷವಾಗಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಭಾರತದ ಅಧಿಕಾರಿಗಳು ನಮ್ಮ ಸರ್ಕಾರಕ್ಕೆ ಬೇಕಿಲ್ಲ. ಕರ್ನಾಟಕವನ್ನು ದಿವಾಳಿ ಮಾಡಿ ತಮ್ಮ ರಾಜ್ಯಗಳಲ್ಲಿ ಬಹು ಅಂತಸ್ತಿನ ಮಹಡಿ ಮಾಲ್ ಕಟ್ಟಿದ್ದಾರೆ ಎಂದು ಎಚ್‍ಡಿಕೆ ಕಿಡಿಕಾರಿದರು.  ಇದನ್ನೂ  ಓದಿ: :ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದ

Share This Article
Leave a Comment

Leave a Reply

Your email address will not be published. Required fields are marked *