ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

Public TV
3 Min Read

ಮೈಸೂರು: ಪ್ರಧಾನಿ ಮೋದಿಯವರ ಹಿಂದಿ ಭಾಷಣ ಕೇಳಿ ಯಾರು ಮರುಳಾಗಬೇಡಿ, ನನಗೆ ಕೆಲಸ ಮಾಡುವ ಒಂದು ಅವಕಾಶವನ್ನು ಕೊಡಿ ಎಂದು ವಿಕಾಸ ಯಾತ್ರೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ನಾಡಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ. ಈ ಹಿಂದಿನ 20 ತಿಂಗಳ ಆಡಳಿತ ಕೇವಲ ಸಿನಿಮಾ ಟ್ರೇಲರ್ ಮಾತ್ರ. ಅಂದು ನಿಮ್ಮ ಪೂರ್ಣ ಅಶೀರ್ವಾದದಿಂದ ನಾನು ಸಿಎಂ ಆಗಿರಲಿಲ್ಲ. ಇಂದು ನಿಮ್ಮ ಆಶೀರ್ವಾದ ಬೇಕಿದೆ ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷವು ಮತದಾರರನ್ನು ಸೆಳೆಯಲು ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದೆ. ಸಮಾವೇಶಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಎಚ್.ಡಿ ಕುಮಾರಸ್ವಾಮಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಎಚ್‍ಡಿಡಿ ವಿಕಾಸ ಯಾತ್ರೆಗೆ ಚಾಲನೆ ನೀಡಿದರು. ವಿಕಾಸ ವಾಹಿನಿ ಬಸ್ ನಲ್ಲಿ ಯಾತ್ರೆ ಆರಂಭಿಸಿದ ಕುಮಾರಸ್ವಾಮಿ ಅವರು ನಂಜನಗೂಡು, ಎಚ್.ಡಿ.ಕೋಟೆ, ದಟ್ಟಗಳ್ಳಿ, ರಾಮಕೃಷ್ಣ ನಗರ ಬೋಗಾದಿ, ಹಿನಕಲ್ ವೃತ್ತಗಳ ಮೂಲಕ ಮೆರವಣಿಗೆ ನಡೆಸಿ ಸಮಾವೇಶ ಪ್ರದೇಶಕ್ಕೆ ತೆರಳಿದರು.

ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಗೆ ಚುನಾವಣೆ ಗೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸಿದ್ದಾರೆ. ಈಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದರೆ ನೂರು ಕೋಟಿ ಬೇಕಾದರು ಖರ್ಚು ಮಾಡುತ್ತಾರೆ. ಈಗ ಅವರಿಗೆ ದುಡ್ಡಿಗೆ ಕಡಿಮೆ ಇಲ್ಲ. ದೇವೆಗೌಡರ ಜೊತೆ ಇದ್ದ ಸಿದ್ದರಾಮಯ್ಯ ಬೇರೆ, ಪ್ರಸ್ತುತ ಸಿದ್ದರಾಮಯ್ಯ ಬೇರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರೊಬ್ಬರು ಮಾತ್ರ ಕುರಿ ಕಾದಿಲ್ಲ. ನಾವು ಗೊಬ್ಬರ ಹೊತ್ತಿದ್ದೇವೆ. ರೈತರ ಕಷ್ಟದ ಅರಿವು ನನಗಿದೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಮಾತ್ರ ಒಪ್ಪುತ್ತಿಲ್ಲ. ನಾವು ಸುಳ್ಳು ಹೇಳುತ್ತೇವೆ ಅಂತಾ ಸಿಎಂ ಹೇಳುತ್ತಾರೆ. ಸಿಎಂ ಒಬ್ಬರೇ ನಾಡಿನಲ್ಲಿ ಸತ್ಯಹರಿಶ್ಚಂದ್ರ. ಸತ್ಯಹರಿಶ್ಚಂದ್ರ ಸಿಎಂ ನೀವು ಎಷ್ಟು ಸಾಲ ಮಾಡಿದ ಮಾಡಿದ್ದೀರಾ ಅಂತಾ ಜನರಿಗೆ ತಿಳಿಸಿ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಚಾಮಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಾರೆ ಅಂತಾ ಈ ಸಮಾವೇಶ ಮಾಡುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಜೆಡಿಎಸ್ ಹಾಳು ಮಾಡಿದವರು ಸಿದ್ದರಾಮಯ್ಯ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ ಪುಣ್ಯಾತ್ಮ. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಮಾಜಿ ಸಂಸದ ಎಚ್. ವಿಶ್ವನಾಥ್ ನನ್ನನ್ನು ಮತ್ತು ನನ್ನ ತಂದೆ ಅವರನ್ನು ಟೀಕಿಸಿದ್ದಾರೆ. ಅವರ ಟೀಕೆ ವೈಯಕ್ತಿಕವಾಗಿರಲಿಲ್ಲ. ಜನರ ಶಕ್ತಿ ಮುಂದೆ ಸಿದ್ದರಾಮಯ್ಯರ ದರ್ಪ, ಹಣ ಬಲ ನಡೆಯಲ್ಲ. ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಸಿದ್ದರಾಮಯ್ಯ ನಮಗೆ ನಗಣ್ಯ ಎಂದರು.

ನನ್ನ ಆರೋಗ್ಯ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿದ್ದು, ಮರುಜನ್ಮವನ್ನು ಪಡೆದಿದ್ದೇನೆ. ಇದನ್ನು ಜನರಿಗಾಗಿ ಮುಡಿಪಾಗಿಡುತ್ತೇನೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನಾನು ತಪ್ಪು ಮಾಡಿರಲಿಲ್ಲ. ಆದರೂ 10 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ವೀರಶೈವ ಸಮಾಜದ ಬಂಧುಗಳೇ ನಾನು ನಿಮ್ಮವನು. ಜಾತಿ ಹೆಸರಿನ ವ್ಯಾಮೋಹಕ್ಕೆ ನನ್ನ ದ್ವೇಷಿಸಬೇಡಿ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಸಿಗದಿದ್ದಕ್ಕೆ ಬಿಜೆಪಿ ಅವರೇ ಕಾರಣ ಅದನ್ನು ವೀರಶೈವರು ಅರ್ಥ ಮಾಡಿಕೊಳ್ಳಬೇಕಿದೆ. ಇಪ್ಪತ್ತು ತಿಂಗಳು ನಮ್ಮ ತಂದೆಗೆ ನೋವು ಕೊಟ್ಟು ಸಿಎಂ ಆದೆ. ಅವರಿಗೆ ನೋವು ಉಂಟಾಗದಂತೆ ಈ ಬಾರಿ ಸಿಎಂ ಆಗಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನ ಜಿ.ಟಿ ದೇವೇಗೌಡ. ಸಿದ್ದರಾಮಯ್ಯ ಅವರ ಮಗ ದಡ್ಡನೋ ಬುದ್ಧಿವಂತನೋ ಗೊತ್ತಿಲ್ಲ. ಅವರನ್ನು ಪದೇ ಪದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳಿಸಿ ಆಟ ನೋಡುತ್ತಿದ್ದಾರೆ. ಸೀತೆ ಮೇಲೆ ರಾವಣ ಕಣ್ಣು ಹಾಕಿದ್ದರಿಂದ ಲಂಕೆಗೆ ಬೆಂಕಿ ಬಿತ್ತು. ನೀವು ಈಗ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದೀರಾ ನಿಮಗೂ ಲಂಕೆಗೆ ಆದ ಕಥೆ ಬರುತ್ತೆ. ನನಗೆ ಕ್ಷೇತ್ರದಲ್ಲಿ ಬಹಳಷ್ಟು ನೋವು ಕೊಟ್ಟಿದ್ದೀರಿ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಜನರು ಇದನ್ನು ಜನ ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡ ದಂಪತಿ ಚಾಮುಂಡಿ ಬೆಟ್ಟದಿಂದ ಮೈಸೂರಿನ ಉತ್ತನಹಳ್ಳಿ ಅಮ್ಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವೇಗೌಡ ಅವರಿಗೆ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮೇಯರ್ ರವಿಕುಮಾರ್ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *