ನಾಲ್ವರು ಕಾರ್ಯಾಧ್ಯಕ್ಷರ ನೇಮಕ: ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ

Public TV
2 Min Read

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಪಕ್ಷದ ನೂತನ ಕೋರ್ ಕಮಿಟಿಯ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆ ಇತ್ಯಾದಿ ವಿಷಯಗಳ ಬಗ್ಗೆ ಈ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಯಿತು.

ಕೋರ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಂಡೆಪ್ಪ ಖಾಷೆಂಪೂರ್ ಹಾಗೂ ಕೋರ್ ಕಮಿಟಿ ವಿಶೇಷ ಆಹ್ವಾನಿತರೂ ಆಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಈ ಸಭೆ ನಡೆಯಿತು. ಇದನ್ನೂ ಓದಿ: ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿಗೆ ತರಾಟೆ – ಬೆಸ್ಕಾಂ, ಜಲ ಮಂಡಳಿಗೂ ಹೈಕೋರ್ಟ್ ಚಾರ್ಜ್

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಂಡೆಪ್ಪ ಖಾಷೆಂಪೂರ್, ಕೋರ್ ಕಮಿಟಿಯ ಮೊದಲ ಸಭೆ ಇದಾಗಿದ್ದು, 17 ಸದಸ್ಯರು ಹಾಜರಿದ್ದರು. ನಾಲ್ವರು ಕಾರ್ಯಾಧ್ಯಕ್ಷರ ನೇಮಕ ಸೇರಿ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು ಎಂದರು.

ಪಕ್ಷದ ಬಲವರ್ಧನೆಗೆ ಏನು ಕ್ರಮ ತೆಗೆದುಕೊಳ್ಳಬೇಕು? ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಬಗ್ಗೆ ಹಾಗೂ ಬೇರೆ ಬೇರೆ ಘಟಕಗಳಿಗೆ ನೇಮಕಾತಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಪಕ್ಷವನ್ನು ಎಲ್ಲ ದಿಕ್ಕುಗಳಲ್ಲೂ ಬಲಿಷ್ಠಗೊಳಿಸುವ ಹಿನ್ನೆಲೆಯಲ್ಲಿ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಾಪ್ ಸಿಂಹ, ರಾಮದಾಸ್ ಕಿತ್ತಾಟ- ಕಣ್ಣೀರಾಕಿದ ಮೇಯರ್

ಪದಾಧಿಕಾರಿಗಳು, ಮಹಿಳಾ ಅಧ್ಯಕ್ಷರ ನೇಮಕ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆಗಳು ಆಗಿವೆ. ಜೆಡಿಎಸ್ ಮಾಧ್ಯಮ ಸೆಲ್ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಹಾಗೂ ಕೈಗಾರಿಕಾ ವಿಭಾಗದ ರಾಜ್ಯಾಧ್ಯಕ್ಷರಾಗಿ ಸುಧಾಕರ್ ಶೆಟ್ಟಿ ಅವರನ್ನು ನೇಮಕ ಮಾಡುವ ಬಗ್ಗೆ ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸಭೆ:
ಬಿಬಿಎಂಪಿ ಚುನಾವಣೆ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ನಗರದ 28 ಕ್ಷೇತ್ರಗಳಿಂದ ಅಧ್ಯಕ್ಷರನ್ನು ಕರೆಸಿ ಚರ್ಚೆ ಮಾಡಲಾಗಿದ್ದು, ಮುಂಬರುವ ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಇದನ್ನೂ ಓದಿ: ಫೆ.14 ರಿಂದ ವಿಧಾನಮಂಡಲದ ಜಂಟಿ ಅಧಿವೇಶನ – ಮಾರ್ಚ್‌ ಮೊದಲ ವಾರ ಬಜೆಟ್‌ ಮಂಡನೆ

ಫೆಬ್ರವರಿ 11ರಂದು ಚಿಂತಾಮಣಿಯಲ್ಲಿ ಕೋರ್‌ ಕಮಿಟಿ ಸಭೆ ನಡೆಸಲಾಗುತ್ತದೆ. ಅಲ್ಲಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಅವರ ಹೊಸ ಕಚೇರಿ ಉದ್ಘಾಟನೆ ಮಾಡಲಾಗುತ್ತದೆ. ಅಲ್ಲಿಯೇ ಈ ಸಭೆ ನಡೆಸಲಾಗುತ್ತದೆ. ಜೊತೆಗೆ ಜಲಧಾರೆ ವಿಚಾರವಾಗಿಯೂ ರೋಡ್ ಮ್ಯಾಪ್ ಮಾಡಲಾಗುತ್ತಿದೆ. ಫೆಬ್ರವರಿ 15ರ ನಂತರ ಜಲಧಾರೆ ಕಾರ್ಯಕ್ರಮ ಮಾಡಬೇಕು ಅಂದುಕೊಂಡಿದ್ದೇವೆ. ಕೊರೊನಾ ಕಡಿಮೆಯಾದರೆ ನಿಗದಿತ ವೇಳೆಗೆ ಮಾಡುತ್ತೇವೆ ಎಂದು ಹೇಳಿದರು.

ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಹಾಗೂ ಸಮಿತಿ ಸಂಚಾಲಕ ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಚಿವರಾದ ವೆಂಕಟರಾವ್‌ ನಾಡಗೌಡ, ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕರಾದ ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪನಾಯ್ಕ ದೊರೆ, ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕ ತಿಮ್ಮರಾಯಪ್ಪ, ನಾಸೀರ್‌ ಭಗವಾನ್‌, ಹನುಮಂತ ಬಸಪ್ಪ ಬೇವಿನಮರದ, ರೂತ್‌ ಮನೋರಮಾ, ಸುಧಾಕರ್‌ ಶೆಟ್ಟಿ, ವಿ.ನಾರಾಯಣಸ್ವಾಮಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *