ಮಂಡ್ಯ: ಶಾಸಕ ಅಂಬರೀಶ್ ಈ ಚುನಾವಣೆಯಲ್ಲಿ ಪರೋಕ್ಷವಾಗಿ ನನ್ನ ಪರವಾಗಿದ್ದಾರೆ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಹೇಳಿದ್ದಾರೆ.
ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ಭರಪೂರ ಹೊಗಳುವುದರ ಜೊತೆಗೆ ಅಂಬಿ ಇಲ್ಲದಿರುವುದು ಈ ಚುನಾವಣೆಯಲ್ಲಿ ನನಗೆ ಪ್ಲಸ್ ಪಾಯಿಂಟ್ ಎಂದಿದ್ದಾರೆ.
ಮಂಡ್ಯದಲ್ಲಿ ಕೈಗೆಟುಕುವ ವ್ಯಕ್ತಿ ನಾನು ಆಗಿದ್ದೇನೆ. ಯಾರಾದರು ಬಂದರೆ ಅವರನ್ನು ಸತ್ಕರಿಸುವ ಔದಾರ್ಯ ನನಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದರು.
ಅಂಬರೀಶ್ ಹಿರಿಯ ಕಲಾವಿದರು. ಕಳೆದ ಬಾರಿ ಅವರ ವಿರುದ್ಧ ಸೋತಿದ್ದರೂ ಕೂಡ ನನ್ನ ಅವರ ಬಾಂಧವ್ಯ ಹದಗೆಟ್ಟಿರಲಿಲ್ಲ. ಚುನಾವಣೆಗೆ ಮಾತ್ರ ನಮ್ಮ ಹೋರಾಟ ಸೀಮಿತವಾಗಿತ್ತು. ಉಳಿದ ವಿಷಯಗಳಲ್ಲಿ ಕಲಾವಿದರಿಗೆ ಕೊಡಬೇಕಾಗಿದ್ದ ಗೌರವ ಕೊಟ್ಟಿದ್ದೆ. ಆ ಗೌರವ ಇಂದು ನಮಗೆ ಶ್ರೀರಕ್ಷೆಯಾಗಿದೆ ಎಂದು ತಿಳಿಸಿದ್ದರು.
ಅಷ್ಟೇ ಅಲ್ಲದೇ ಅಂಬರೀಶ್ ಅವರು ಕೂಡ ನನ್ನ ಬೆಂಬಲಿಸಿದ್ದಾರೆ. ನನ್ನ ಪರ ಪ್ರಚಾರಕ್ಕೆ ಬರುವುದು ಅವರ ಇಚ್ಚೆಗೆ ಬಿಟ್ಟದ್ದು. ನಾನು ಅವರನ್ನು ಕೇಳಿಕೊಂಡಿದ್ದೇನೆ. ಆಗ ಅಂಬರೀಶ್ ದೇವರು ನಿನಗೆ ಒಳ್ಳೆದು ಮಾಡುತ್ತಾನೆ ಹೋಗು ಎಂದಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಅಂಬರೀಶ್ ಅವರನ್ನು ನೇರವಾಗಿ ಭೇಟಿ ಮಾಡಿದ್ದೀರಾ ಅಥವಾ ದೂರವಾಣಿ ಮುಖಾಂತರ ಸಂಪರ್ಕಿಸಿದ್ದೀರಾ ಎನ್ನುವ ಪ್ರಶ್ನೆಗೆ ಶ್ರೀನಿವಾಸ್ ಉತ್ತರ ನೀಡಲು ನಿರಾಕರಿಸಿದರು.