ಭೂಮಿ ಪೂಜೆ ವೇಳೆ ಶಾಸಕರ ಎದುರೇ JDS, BJP ಮಾರಾಮಾರಿ – ಮುರಿತು ಕಾರ್ಯಕರ್ತನ ಕೈ

Public TV
2 Min Read

ಹಾಸನ: ಭೂಮಿ ಪೂಜೆ ಕಾರ್ಯಕ್ರಮದ ವೇಳೆ ಶಾಸಕರೆದುರೇ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತನ ಕೈಮುರಿದಿರುವ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಡಿಎಂ ಕುರ್ಕೆ ಗ್ರಾಮದಲ್ಲಿ ನಡೆದಿದೆ.

ಹೇಮಾವತಿ ಪೈಪ್ ಲೈನ್ ಕಾಮಗಾರಿಗೆ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಿದ್ದರು. ಶಾಸಕರು ಭೂಮಿ ಪೂಜೆ ಆರಂಭಿಸುತ್ತಿದ್ದಂತೆ ಜೆಡಿಎಸ್ ಮುಖಂಡರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಥಳದಲ್ಲಿದ್ದ ಕೆಲ ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಶಾಸಕರು ಸಮಾಧಾನ ಮಾಡಲು ಹರಸಾಹಸಪಟ್ಟರು ಸಾಧ್ಯವಾಗಿಲ್ಲ.

ಜೆಡಿಎಸ್‍ನವರು ಬಿಜೆಪಿಯವರನ್ನು, ಬಿಜೆಪಿಯವರು ಜೆಡಿಎಸ್ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಗಲಾಟೆಯಲ್ಲಿ ಬಿಜೆಪಿ ಕಾರ್ಯಕರ್ತ ರಾಂಪುರ ಗ್ರಾಮದ ಸುರೇಶ್ ಬಲಗೈ ಮುರಿತವಾಗಿದೆ. ಗಾಯಾಳುವಿಗೆ ಅರಸೀಕೆರೆ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಗುರುದ್ವಾರದ ಮಾಜಿ ಗ್ರಂಥಿ ಮೇಲೆ ಹಲ್ಲೆಗೈದು, ಕೂದಲು ಕಟ್ ಮಾಡಿದ ಕಿಡಿಗೇಡಿಗಳು 

ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ನಿನ್ನೆಯಷ್ಟೇ ಏಳು ಮಂದಿ ನಗರಸಭೆ ಸದಸ್ಯರ ಅನರ್ಹತೆ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಅದರಲ್ಲಿ ಕೆಲ ಸದಸ್ಯರು ಡಿ.ಎಂ.ಕುರ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಭೂಮಿ ಪೂಜೆ ಕಾರ್ಯಕ್ರಮದ ವೇಳೆ ಸ್ಥಳದಲ್ಲಿವ ವೀಡಿಯೋ ತುಣುಕುಗಳಲ್ಲಿ ಚಿತ್ರಿಕರಣವಾಗಿದೆ. ಅವರ ಕುಮ್ಮಕ್ಕಿನಿಂದಲೇ ಸುಖಾಸುಮ್ಮನೆ ತೆಗೆದು ಗಲಾಟೆ ಮಾಡಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಹಾಸನ ಜಿಲ್ಲೆ, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತ ಇವೆ. ಸತತ ಮೂರು ಭಾರೀ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಭಿವೃದ್ಧಿ ಕಾರ್ಯ, ಹಳ್ಳಿ ಸೊಗಡಿನ ಮಾತಿನ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಇದೇ ಕ್ಷೇತ್ರಕ್ಕೆ ಕಣ್ಣಿಟ್ಟಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು, ಅರಸೀಕೆರೆಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

ಎನ್.ಆರ್.ಸಂತೋಷ್ ಅವರು ಕ್ಷೇತ್ರದಲ್ಲಿ ಕಾರ್ಯಕ್ರಮಗಳ ಆಯೋಜನೆ, ಸಂಘಟನೆಗೆ ಓಡಾಡ ನಡೆಸಲು ಆರಂಭಿಸಿದ ಮೇಲೆ ಅರಸೀಕೆರೆ ತಾಲೂಕಿನಲ್ಲಿ ರಾಜಕೀಯ ಘರ್ಷಣೆಗಳು ಹೆಚ್ಚಾಗಿವೆ. ಇದು ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಆರಕ್ಕೂ ಹೆಚ್ಚು ಗಲಾಟೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಅರಸೀಕೆರೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *