ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

Public TV
2 Min Read

– ಭಾರತೀಯ ಮೂಲದ ಉಷಾ ಅವರ ಪತಿ ಜೆಡಿ ವ್ಯಾನ್ಸ್

ಹೈದರಾಬಾದ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ (JD Vance) ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ಆಂಧ್ರಪ್ರದೇಶದ (Andhra Pradesh) ವಡ್ಲೂರಿನಲ್ಲಿ (Vadluru) ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ನ ಡೊನಾಲ್ಡ್ ಟ್ರಂಪ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 2ನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಜೊತೆಗೆ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಪುಸ್ತಕ ತೆರೆದ್ರೆ ಬರೀ ಕಪ್ಪು ಕಾಣಿಸ್ತದೆ, ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ: ಅಶೋಕ್

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜೆಡಿ ವ್ಯಾನ್ಸ್ ಆಂಧ್ರಪ್ರದೇಶದ ವಡ್ಲೂರ ಗ್ರಾಮದ ಅಳಿಯ. ಹೌದು ವಡ್ಲೂರಿನ ಉಷಾ ಅವರನ್ನು ಜೆಡಿ ವ್ಯಾನ್ಸ್ ವಿವಾಹವಾಗಿದ್ದಾರೆ.

ಉಷಾ ಹಿನ್ನೆಲೆ ಏನು?
ಆಂಧ್ರಪ್ರದೇಶದ ವಡ್ಲೂರಿನಲ್ಲಿದ್ದ ಉಷಾ ಪೋಷಕರು 1986ರಲ್ಲಿ ಆಂಧ್ರಪ್ರದೇಶದಿಂದ ಅಮೆರಿಕಕ್ಕೆ ತೆರಳಿದರು. ಆಗ ಆ ದಂಪತಿಗೆ ಜನಿಸಿದ ಮಗು ಉಷಾ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ತಮ್ಮ ಬಾಲ್ಯವನ್ನು ಕಳೆದರು.

ಯೇಲ್ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಪದವಿಯನ್ನು ಪಡೆದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge) ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಯೇಲ್ ಜರ್ನಲ್ ಆಫ್ ಲಾ, ಟೆಕ್ನಾಲಜಿ ಮತ್ತು ದಿ ಯೇಲ್ ಲಾ ಜರ್ನಲ್‌ನಲ್ಲಿ ವ್ಯವಸ್ಥಾಪಕ ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಯೇಲ್ ಲಾ ಸ್ಕೂಲ್‌ನಲ್ಲಿ ಉಷಾ ಹಾಗೂ ಜೆಡಿ ವ್ಯಾನ್ಸ್ ಮೊದಲ ಬಾರಿಗೆ ಭೇಟಿಯಾದರು. ಇದಾದ ಬಳಿಕ 2014ರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈಗ ಮೂರು ಮಕ್ಕಳನ್ನು ಹೊಂದಿದ್ದಾರೆ. ಜೆಡಿ ವ್ಯಾನ್ಸ್ ಅವರ ರಾಜಕೀಯ ವೃತ್ತಿಜೀವನದುದ್ದಕ್ಕೂ ಉಷಾ ಬೆಂಬಲ ನೀಡಿದ್ದಾರೆ. ಭಾರತೀಯ ಮೂಲದ ಮಹಿಳೆಯಾಗಿರುವ ಉಷಾ ಅವರ ಪತಿ ಇದೀಗ ಅಮೆರಿಕದ ಉಪಾಧ್ಯಕ್ಷರಾಗಿದ್ದು, ಆಂಧ್ರಪ್ರದೇಶದ ವಡ್ಲೂರಿನಲ್ಲಿ ಸಂಭ್ರಮ ಮನೆ ಮಾಡಿದೆ.ಇದನ್ನೂ ಓದಿ: ತೆಲುಗಿಗೆ ರಿಮೇಕ್ ಆಗಲಿದೆ ‘ಆವೇಶಂ’ ಸಿನಿಮಾ- ಹೀರೋ ಯಾರು?

Share This Article