ಸಚಿವ ರೇವಣ್ಣರನ್ನ ಹೊಗಳಿ, ಸ್ವಪಕ್ಷೀಯರಿಗೆ ಸಚಿವೆ ಜಯಾಮಾಲಾ ಟಾಂಗ್

Public TV
2 Min Read

ಹಾಸನ: ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಎಚ್.ಡಿ.ರೇವಣ್ಣ ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ವರ್ಗಾವಣೆ ಸೇರಿದಂತೆ ಆಡಳಿತದಲ್ಲಿ ಕೈಯಾಡಿಸುತ್ತಾರೆ. ಇವರೇ ಸೂಪರ್ ಸಿಎಂ ರೀತಿ ಆಗಿದ್ದಾರೆ ಎನ್ನೋದು ಕಾಂಗ್ರೆಸ್‍ನ ಕೆಲವು ಸಚಿವರು ಅಸಮಾಧಾನ. ಆದರೆ ಸಚಿವೆ ಹಾಗೂ ಖ್ಯಾತ ನಟಿ ಡಾ.ಜಯಮಾಲಾ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಹಾಡಿ ಹೊಗಳಿದ್ದಲ್ಲದೇ, ಇರೋವರೆಗೂ ನೀವು ಸೋಲುವುದೇ ಇಲ್ಲ. ಕೊನೆವರೆಗೂ ಶಾಸಕರಾಗಿರುತ್ತೀರಿ ಎಂದು ಗುಣಗಾನ ಮಾಡಿದ್ದಾರೆ.

ಹಾಸನ ಜಿಲ್ಲೆ ಶ್ರವಣಬೆಳಗೊಳ ಜೈನಮಠದ ಪೀಠಾಧ್ಯಕ್ಷರಾದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಜಯಮಾಲಾ, ಸಭೆಯಲ್ಲಿ ರೇವಣ್ಣ ಅವರನ್ನು ಕೊಂಡಾಡಿದರು. ಹಾಸನದಲ್ಲಿ ಶುಚಿತ್ವಕ್ಕೆ ರೇವಣ್ಣ ಅವರು ನೀಡಿರುವ ಆದ್ಯತೆಯನ್ನು ಎಲ್ಲಾ ಕಡೆ ಜನರು ಮಾತನಾಡುತ್ತಿದ್ದಾರೆ. ಜನರು ಏನೂ ಕೇಳದೇ ಇದ್ದರೂ, ಅವರಿಗೆ ಬೇಕಾದುದನ್ನು ಅರ್ಥೈಸಿಕೊಂಡು ರೇವಣ್ಣ ಅವರೇ ಒಂದು ಸಾಮ್ರಾಜ್ಯ ನಿರ್ಮಾಣ ಮಾಡಿದ್ದಾರೆ.

ಹಾಸನ ಜಿಲ್ಲೆ ನೋಡಿದಾಗ ಅವರ ಶ್ರಮದ ದರ್ಶನವಾಗಲಿದೆ. ಯಾವುದೇ ಸರ್ಕಾರವಿರಲಿ, ವಿಧಾನಸೌಧದಲ್ಲಿ ಇಂಥ ಕೆಲಸ ನಮ್ಮ ಜಿಲ್ಲೆಗೆ ಆಗಬೇಕು ಎಂದು ಏಕೆ ಪಟ್ಟು ಹಿಡಿಯುತ್ತಾರೆ ಎಂಬುದು ನನಗೀಗ ಅರ್ಥವಾಗಿದೆ. ಹೀಗಾಗಿ ರೇವಣ್ಣ ಅವರು ಬದುಕಿರುವವರೆಗೂ ಎಂಎಲ್ ಎ ಆಗಿರುತ್ತಾರೆ ಎಂದು ಭವಿಷ್ಯ ನುಡಿದ ಅವರು, ಜನಪ್ರತಿನಿಧಿಯಾದವರು ಜನರ ಭಾವನೆ ಅರ್ಥ ಮಾಡಿಕೊಂಡು, ಅವರ ಅಗತ್ಯತೆಗಳಿಗೆ ಸ್ಪಂದಿಸಬೇಕು. ಆ ಕೆಲಸವನ್ನು ರೇವಣ್ಣ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

ಮಹಿಳೆಯರು, ಮಕ್ಕಳ ಬಗ್ಗೆ ಸಚಿವರು ಹೊಂದಿರುವ ಸಹಾನುಭೂತಿ, ದೇವರ ಮೇಲಿನ ಅಪಾರ ನಂಬಿಕೆ ಅವರನ್ನು ಜೀವನದಲ್ಲಿ ಎಂದೂ ಸೋಲಿಸದು. ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ಕೊನೆವರೆಗೂ ಹೀಗೇ ಇರಿ ಎಂದು ಶುಭಕೋರಿದರು. ತಮ್ಮ ಪಕ್ಷದ ಸಚಿವರು, ರೇವಣ್ಣ ಅವರನ್ನು ಒಂದೇ ಸಮನೆ ಗುಣಗಾನ ಮಾಡುವುದನ್ನು ಕಂಡ ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸುಮ್ಮನೆ ನೋಡುತ್ತಾ ಕುಳಿತಿದ್ದರು. ಜಯಮಾಲಾ ತಮ್ಮ ಕುರಿತಾಗಿ ಮಾತನಾಡುವುದನ್ನು ನಗುಮೊಗದಿಂದ ಆಲಿಸಿದ ಸಚಿವರು, ನಂತರ ಸ್ವಾಮೀಜಿ ಸೇರಿದಂತೆ ಬಹುತೇಕರು ಮಾತನಾಡುವಾಗ ವೇದಿಕೆಯಲ್ಲೇ ನಿದ್ರೆಗೆ ಜಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=LwzR1wGUpGU

Share This Article
Leave a Comment

Leave a Reply

Your email address will not be published. Required fields are marked *