ಮತ್ತೆ ಸೇನೆಗೆ ಹಿಂದಿರುಗಲು ಪತಿ ನಿರ್ಧಾರ – ಪತ್ನಿ ನೇಣಿಗೆ ಶರಣು

Public TV
2 Min Read

ಗಾಂಧಿನಗರ: ಯೋಧನ ಪತ್ನಿಯೊಬ್ಬರು ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಭಯಗೊಂಡಿದ್ದು, ತನ್ನ ಪತಿಗೂ ಇದೇ ರೀತಿ ಆಗಬಹುದೆಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.

ದ್ವಾರಕಾದ ಜಿಲ್ಲೆಯ ಖಂಭಾಲಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ ಜೆಟ್ವಾ (22) ಮೃತ ಯೋಧನ ಪತ್ನಿ. ಮೀನಾಕ್ಷಿ ಅವರು ತಮ್ಮ ಪತಿ ಭೂಪೇಂದ್ರ ಸಿಂಗ್ ಜೆಟ್ವಾ ಅವರ ಯೋಗೇಶ್ವರನಗರದ ನಿವಾಸದಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭೂಪೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಗುಲ್‍ಮಾರ್ಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೇನೆಯಿಂದ ರಜೆ ಪಡೆದು ಮನೆಗೆ ಬಂದಿದ್ದರು. ಈ ವೇಳೆ ಇತ್ತೀಚಿಗೆ ನಡೆದ ಹಿಮಪಾತದಲ್ಲಿ ಅದೃಷ್ಟವಶಾತ್ ನಾನು ಸಾವಿನಿಂದ ಬಚಾವಾದೆ ಎಂದು ಕುಟುಂಬದವರಿಗೆ ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರ ಕೇಳಿದ ಪತ್ನಿ ಮೀನಾಕ್ಷಿ ಆತಂಕಗೊಂಡಿದ್ದರು. ಇದರ ಬೆನ್ನಲ್ಲೇ ಪುಲ್ವಾಮಾ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಈ ದಾಳಿಯ ಬಗ್ಗೆ ತಿಳಿದ ಬಳಿಕ ಮೀನಾಕ್ಷಿ ಆಘಾತಕ್ಕೊಳಗಾಗಿದ್ದರು ಎಂದು ಇನ್ಸ್ ಪೆಕ್ಟರ್ ಕೆ.ಎಸ್ ಜಡೇಜಾ ಅವರು ಹೇಳಿದ್ದಾರೆ.

ಭೂಪೇಂದ್ರ ಮತ್ತು ಮೀನಾಕ್ಷಿ ಅವರು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಪುಲ್ವಾಮಾ ಉಗ್ರರ ದಾಳಿಯ ಬಳಿಕ ಪತ್ನಿ ಮೀನಾಕ್ಷಿ ಪತಿ ಬಳಿ, ನೀವು ಮತ್ತೆ ಸೇನೆಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಯೋಧ ಭೂಪೇಂದ್ರ ಅವರು ರಜೆ ಮುಗಿದ ಬಳಿಕ ಸೇನೆಗೆ ಹೋಗಲು ನಿರ್ಧರಿಸಿದ್ದರು.

ಶನಿವಾರ ರಾತ್ರಿ ಭೂಪೇಂದ್ರ ಮತ್ತು ಅವರ ಕುಟುಂಬದವರು ಕಾರ್ಯಕ್ರಮವೊಂದಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಆದರೆ ಮೀನಾಕ್ಷಿ ಮಾತ್ರ ಮನೆಯಲ್ಲಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಎಲ್ಲರೂ ಮನೆಗೆ ಹಿಂದಿರುಗಿದ್ದಾರೆ. ಈ ವೇಳೆ ಮೀನಾಕ್ಷಿ ತನ್ನ ರೂಮನ್ನು ಲಾಕ್ ಮಾಡಿಕೊಂಡಿದ್ದರು. ಪತ್ನಿ ಬಾಗಿಲು ಲಾಕ್ ಮಾಡಿಕೊಂಡಿದ್ದನ್ನು ನೋಡಿ ಪತಿ ಸುಮ್ಮನೆ ತೊಂದರೆ ಕೊಡುವುದು ಬೇಡ ಎಂದು ಬೇರೆ ರೂಮಿನಲ್ಲಿ ಮಲಗಿದ್ದಾರೆ.

ಭಾನುವಾರ ಬೆಳಗ್ಗೆ ಮೀನಾಕ್ಷಿ ರೂಮಿನಿಂದ ಹೊರ ಬರಲಿಲ್ಲ. ಇದರಿಂದ ಆತಂಕಗೊಂಡ ಪತಿ ಭೂಪೇಂದ್ರ ಬಾಗಿಲು ಬಡಿದಿದ್ದಾರೆ. ಆದರೆ ಪತ್ನಿ ರೂಮಿನ ಬಾಗಿಲು ತೆಗೆಯಲಿಲ್ಲ. ಕೊನೆಗೆ ಪತಿ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ಪತ್ನಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಜಡೇಜಾ ಅವರು ತಿಳಿಸಿದ್ದಾರೆ.

ಕುಟುಂಬದ ಸದಸ್ಯರು ನೋವಿನಲ್ಲಿದ್ದರು. ಹೀಗಾಗಿ ಅವರನ್ನು ವಿಚಾರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *