– ಸವದಿ ಬೆಂಬಲಿಗರ ಸಂಭ್ರಮಾಚರಣೆ
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ (Jarkiholi Brothers) ಮತ್ತೊಮ್ಮೆ ಹಿನ್ನೆಡೆಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕತ್ತಿ ಕುಟುಂಬದ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹಿನ್ನಡೆ ಅನುಭವಿಸಿದರೆ ಈಗ ಅವರ ಸಹೋದರ ರಮೇಶ್ ಜಾರಕಿಹೊಳಿ (Ramesh Jarkiholi) ಲಕ್ಷ್ಮಣ ಸವದಿಗೆ ಸೆಡ್ಡು ಹೊಡೆದು ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದಾರೆ.
ತೀವ್ರ ಕುತುಹಲಕ್ಕೆ ಕಾರಣವಾಗಿದ್ದ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಂಘದ ಚುನಾವಣೆ ಮುಕ್ತಾಯವಾಗಿದೆ. ಶಾಸಕ ಲಕ್ಷ್ಮಣ್ ಸವದಿ (Laxman savadi) ವಿರುದ್ಧ ಅಥಣಿ ತಾಲೂಕಿನ ಎಲ್ಲಾ ಪಕ್ಷದ ನಾಯಕರು ಒಂದಾಗಿ ತೊಡೆ ತಟ್ಟಿದ್ದರು. ಅದರಲ್ಲೂ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮಾಜಿ ಶಾಸಕರಾದ ಮಹೇಶ ಕುಮಟಳ್ಳಿ, ಶಹಜಾನ ಡೊಂಗರಗಾಂವ ಹಾಗೂ ಕೈ ಮುಖಂಡ ಗಜಾನನ ಮಂಗಸೂಳಿ ಜೊತೆಗೂಡಿ ಸವದಿಗೆ ಸೆಡ್ಡು ಹೊಡೆದಿದ್ದರು.
ಭಾನುವಾರ ಬೆಳಿಗ್ಗೆ ಆರಂಭವಾದ ಚುನಾವಣೆ ಮಧ್ಯಾಹ್ನದವರೆಗೂ ಶಾಂತಿಯುತವಾಗಿ ನಡೆದಿತ್ತು. ಆದರೆ ಮೃತ ಸದಸ್ಯರ ಮತವನ್ನು ಸವದಿ ಬಣದವರು ಮಾಡುತ್ತಿದ್ದಾರೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಹಾಗೂ ಸವದಿ ಬಣದ ನಡಿವೆ ವಾಗ್ವಾದ ನಡೆಯುವದರ ಜೊತೆಗೆ ಎರಡು ಬಣಗಳ ನಡುವಿನ ಮಾರಾಮಾರಿ ನಡೆಯಿತು. ಬಳಿಕ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದರು. ಇದು ದಬ್ಬಾಳಿಕೆಯ ಚುನಾವಣೆ ಪಾರದರ್ಶಕವಾಗಿ ಚುನಾವಣೆ ಆಗಿಲ್ಲ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಆರೋಪಿಸಿದರು. ಇದನ್ನೂ ಓದಿ: ನೆಲಮಂಗಲದ ಇಸ್ಲಾಂಪುರದಲ್ಲಿ ಪಂಚಾಯತ್ ಸದಸ್ಯನ ಮೇಲೆ ಗುಂಡಿನ ದಾಳಿ
ಗಲಾಟೆ ಬಳಿಕ ಚುನಾವಣೆ ಪ್ರಕ್ರಿಯೆ ಮುಗಿದು ಒಟ್ಟು 11,300 ಮತದಾರರಲ್ಲಿ 8,975 ಮತದಾರರಿಂದ ಮತ ಚಲಾವಣೆ ಮಾಡಿದರು. ನ್ಯಾಯಾಲಯದಲ್ಲಿ ವಿಚಾರಣೆ ಹಿನ್ನೆಲೆ ಇಂದು ಮತ ಎಣಿಕೆಗೆ ಮಾತ್ರ ಅವಕಾಶ ಕಲ್ಪಿಸಿ ಅಧಿಕೃತ ಚುನಾವಣೆ ಫಲಿತಾಂಶ ಪ್ರಕಟಿಸಲಿಲ್ಲ.
ಮತ ಎಣಿಕೆಯಲ್ಲಿ ಅನಧಿಕೃತವಾಗಿ ಸವದಿ ಬಣದ 12 ನಿರ್ದೇಶಕರು ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದರೆ ಓರ್ವ ನಿರ್ದೇಶಕ ಅವಿರೋಧವಾಗಿ ಆಯ್ಕೆಯಾಗುವದರ ಮೂಲಕ ಪೆನಲ್‌ನ ಎಲ್ಲಾ ಸದಸ್ಯರು ಗೆದ್ದಿರುವ ಹುಮ್ಮಸ್ಸಿನಲ್ಲಿ ಸವದಿ ಪುತ್ರ ಚಿದಾನಂದ ಸವದಿ ಹಾಗೂ ಅಭಿಮಾನಿಗಳು ಹಲ್ಯಾಳ ಗ್ರಾಮದ ಸಕ್ಕರೆ ಕಾರ್ಖಾನೆ ಆವರಣ ಹಾಗೂ ಅಥಣಿ ಪಟ್ಟಣದಲ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿ ಸಿಹಿ ಹಂಚಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂಭ್ರಮಿಸಿದರು.
ಒಟ್ಟಿನಲ್ಲಿ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಸವದಿ ಸೋಲಿಸಲು ಪಕ್ಷಾತೀತವಾಗಿ ವಿರೋಧಿಗಳನ್ನು ಒಂದೂಗೂಡಿಸಿದ ಪ್ಲಾನ್ ವಿಫಲವಾಗಿದೆ. ಹೊರಗಿನವರಿಗೆ ಆಡಳಿತ ಮಾಡಲು ಬಿಡುವದಿಲ್ಲ ಎನ್ನುವ ಸಂದೇಶವನ್ನು ಹುಕ್ಕೇರಿ ತಾಲೂಕಿನ ನಂತರ ಮತ್ತೊಮ್ಮೆ ಅಥಣಿ ತಾಲೂಕಿನ ಜನರು ಜಾರಕಿಹೊಳಿ ಸಹೋದರರಿಗೆ ರವಾನಿಸಿದ್ದಾರೆ.

 
			 
		 
		 
		 
                              
		