– ನನ್ನ ಹೆಲಿಕಾಪ್ಟರ್ ಯಾವತ್ತು ಅನಾಥವಾಗಿರಲಿಲ್ಲ
ಬೆಂಗಳೂರು: ನಾನು ಕಷ್ಟದಲ್ಲಿ ಇದ್ದಾಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಹಾಗೂ ಜಗದೀಶ್ ಶೆಟ್ಟರ್ (Jagadish Shettar) ಇಬ್ಬರು ಬಂದು ನನಗೆ ಧೈರ್ಯ ತುಂಬಿದ್ದರು. ಅದಕ್ಕಾಗಿ ನಾನು ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಆದರೆ ನನ್ನವರೇ ಅಂತ ನಾನು ಎಲ್ಲರನ್ನು ಮೆರೆಸಿ ಮೋಸ ಹೋದೆ. ಇದನ್ನ ನನ್ನ ಸ್ನೇಹಿತರು ಈಗಲೂ ಹೇಳ್ತಾರೆ. ನನ್ನ ಜೊತೆ ಕಷ್ಟದಲ್ಲಿ ಯಾರು ಬಂದಿಲ್ಲ. ನಾನು ಚೆನ್ನಾಗಿ ಇದ್ದಾಗ ಎಲ್ಲರೂ ನನ್ನನ್ನು ಹೊಗಳಿದರು. ಆದರೆ ಕಷ್ಟದಲ್ಲಿ ಇದ್ದಾಗ ಯಾರು ಬಂದಿಲ್ಲ ಎಂದು ಕಿಡಿಕಾರಿದರು.
ನಾನು ಜೈಲಿಗೆ ಹೋದ ಮೇಲೆ ನನ್ನ ಹೆಂಡತಿ, ಮಕ್ಕಳು ತುಂಬಾ ಕಷ್ಟ ಅನುಭವಿಸಿದರು. ನನ್ನ ಶ್ರೀಮತಿ ಕುಟುಂಬ ದೊಡ್ಡದು. ಆದರೂ ನನ್ನ ನೋವನ್ನು ಆಕೆ ತಡೆದುಕೊಂಡಳು. ಪತ್ನಿ ಕುಟುಂಬ ಕೂಡಾ ಆತಂಕ ಪಟ್ಟಿದ್ದರು. ಆದರೆ ನನ್ನ ಹೆಂಡತಿ ಮಕ್ಕಳು ಧೃತಿಗೆಡದೆ ಧೈರ್ಯವಾಗಿ ಫೇಸ್ ಮಾಡಿದರು. ನಾನು ಎಷ್ಟು ದಿನ ಆಗುತ್ತೊ ಹೊರಗೆ ಬರೋಕೆ ಅಂತ ಗೊತ್ತಿಲ್ಲ ಅಂತ ಹೇಳಿ ಹೋದೆ. ಆದರೆ ನನ್ನ ಪತ್ನಿ ಎಲ್ಲಾ ನಿಭಾಯಿಸಿದಳು ಎಂದು ಹೇಳಿದರು. ಇದನ್ನೂ ಓದಿ: ಆಧಾರ್‌ಗೆ ಲಿಂಕ್ ಮಾಡದೇ ಹೋದರೆ ನಿಮ್ಮ ಪ್ಯಾನ್ ನಿಷ್ಕ್ರಿಯ
ಮಗ ಡಿಗ್ರಿ ಮುಗಿಸಿ ಇವತ್ತು ಚಿತ್ರರಂಗಕ್ಕೆ ಬಂದಿದ್ದಾನೆ. ಮಕ್ಕಳು ಸೆಟಲ್ ಆಗಿದ್ದಾರೆ. ಎಲ್ಲಾ ಕಷ್ಟ ನನ್ನ ಶ್ರೀಮತಿ ತಡೆದುಕೊಂಡಿದ್ದಾಳೆ ಎಂದ ಅವರು, ನನ್ನ ಹೆಲಿಕಾಪ್ಟರ್ ಯಾವತ್ತು ಅನಾಥವಾಗಿರಲಿಲ್ಲ. ಕೆಲ ಮಾಧ್ಯಮಗಳು ಹಾಗೆ ಸುದ್ದಿ ಮಾಡಿದರು. ಕೋರ್ಟ್ ಕೂಡಾ ಹೆಲಿಕಾಪ್ಟರ್ ಬಿಟ್ಟಿತ್ತು. ಆದರೆ ಮಕ್ಕಳಿಗೆ ಕಷ್ಟ ಗೊತ್ತಾಗಬೇಕು ಅಂತ ಹೆಲಿಕಾಪ್ಟರ್ ಬಳಕೆ ಮಾಡಿಸಿಕೊಂಡಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಭ್ರಷ್ಟಾಚಾರದ ಆರೋಪ ಮಾಡಿ ಅರೆಸ್ಟ್ ಆಗಿದ್ದ ಕೆಂಪಣ್ಣಗೆ ಜಾಮೀನು